ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನವೂ ಬಸ್‌ ಬಂದ್

ಬಸ್‌ ಸಂಚಾರ ಸಂಪೂರ್ಣ ಸ್ಥಗಿತ: ವಿವಿಧ ಪಕ್ಷ, ಸಂಘಟನೆಗಳ ಬೆಂಬಲ
Last Updated 13 ಡಿಸೆಂಬರ್ 2020, 7:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಎರಡನೇ ದಿನ (ಶನಿವಾರ)ವು ಮುಂದುವರಿಯಿತು. ವಿವಿಧ ಪಕ್ಷ, ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದವು. ಬಸ್‌ಗಳ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ, ಚಾಲಕರು, ನಿರ್ವಾಹಕರು, ಸಿಬ್ಬಂದಿ, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಪ್ರತಿಭಟನೆಗೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿ, ಮುಷ್ಕರದಲ್ಲಿ ಭಾಗವಹಿಸಿದ್ದರು. ಪರಿಣಾಮ ಜಿಲ್ಲೆಯ ಯಾವ ಭಾಗದಲ್ಲೂ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಎರಡನೇ ದಿನವೂ ಬಸ್‌ಗಳ ಸಂಚಾರವಿಲ್ಲದೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲವರು ನಿಲ್ದಾಣದ ಕಡೆಗೆ ಬಂದರೂ ವಿಷಯ ತಿಳಿದು ಹಿಂತಿರುಗಿದರು. ಖಾಸಗಿ ಬಸ್‌ಗಳ ಮೂಲಕ ಅನ್ಯ ಕಡೆಗೆ ತೆರಳಿದರು. ಖಾಸಗಿಯವರು ಹೆಚ್ಚಿನ ಹಣ ಕೇಳುತ್ತಿದ್ದರಿಂದ ಹಲವರು ಮನೆ ಕಡೆಗೆ ಮುಖ ಮಾಡಿದರು. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಇದೇ ಸ್ಥಿತಿ ಇತ್ತು.

ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಮುಖ್ಯದ್ವಾರದ ಬಳಿ ಖಾಸಗಿ ಬಸ್‌, ಟೆಂಪೊ, ಟ್ರಾಕ್ಸ್‌ಗಳು ಜಮಾವಣೆಯಾಗಿದ್ದವು. ಅವುಗಳ ನಿರ್ವಾಹಕರು ಬಸ್‌ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ತಮ್ಮತ್ತ ಕೂಗಿ, ಕರೆಯುತ್ತಿದ್ದರು. ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದ ಕಾರಣ ಖಾಸಗಿ ವಾಹನಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ಶನಿವಾರ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದವು.

ಬೇಡಿಕೆ ಈಡೇರಿಸುವಂತೆ ಆಗ್ರಹ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ನ ಚಿಕ್ಕಬಳ್ಳಾಪುರ ವಿಭಾಗದ ಉಪಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ‘ರಾಜ್ಯ ಸರ್ಕಾರ ಕೂಡಲೇ ಸಾರಿಗೆ ನೌಕರ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ಸಾರಿಗೆ ನೌಕರರು ನಿರಂತರವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತ ಬರುತ್ತಿದ್ದಾರೆ. ಆದರೆ, ಈವರೆಗೆ ಯಾವ ಸರ್ಕಾರವೂ ನೌಕರರ ಬೇಡಿಕೆ ಈಡೇರಿಸಲು ಮುಂದಾಗದಿರುವುದೇ ಸದ್ಯದ ದಿಢೀರ್‌ ಮುಷ್ಕರಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ನೌಕರರ ಪ್ರತಿನಿಧಿಗಳ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೋವಿಡ್, ಲಾಕ್‌ಡೌನ್‌ ಸಂದರ್ಭವನ್ನು ಸರ್ಕಾರ ನಿರ್ವಹಿಸಿದ ರೀತಿಯ ಬಗ್ಗೆ ಜನರಲ್ಲಿ ಅಸಂತೃಪ್ತಿ ಇದೆ. ಅದೀಗ ಆಕ್ರೋಶವಾಗಿ ಹೊರಹೊಮ್ಮಲು ಆರಂಭಿಸಿದೆ. ಅದರ ಪ್ರತಿಕವಾಗಿ ಜನರು ಈ ಮುಷ್ಕರವನ್ನು ಸಹಾನುಭೂತಿಯಿಂದ ಬೆಂಬಲಿಸುತ್ತಿದ್ದಾರೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT