ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ತರ ಸುಭಿಕ್ಷೆಗೆ ಶ್ರಮಿಸಿದ ಚೇತನ

ಜಿಲ್ಲಾಡಳಿತದಿಂದ ಅಂಬೇಡ್ಕರ್ 66ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ನಾಗರಾಜ್ ಅಭಿಮತ
Last Updated 7 ಡಿಸೆಂಬರ್ 2022, 4:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಸಮಸ್ತ ನಾಗರಿಕರ ಸುಭಿಕ್ಷೆಗೆ ಶ್ರಮಿಸಿದ ಚೇತನ’ ಎಂದು ಜಿಲ್ಲಾಧಿಕಾರಿಎನ್.ಎಂ.ನಾಗರಾಜ್ ತಿಳಿಸಿದರು.

ನಗರದ ಜೈಭೀಮ್ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದಿಂದದಲಿತರು, ಕಾರ್ಮಿಕರು, ಮಹಿಳೆಯರ ಸ್ಥಿತಿಗತಿ, ಸ್ಥಾನಮಾನಗಳು ಸುಧಾರಣೆಯಾದವು. ಅಲ್ಲದೆ, ಅಂಬೇಡ್ಕರ್ ಅವರು ದೇಶದ ಸಮಸ್ತ ನಾಗರಿಕರ ಸುಭಿಕ್ಷೆಗೆ ಶ್ರಮಿಸಿದರು ಎಂದರು.

ಅಂಬೇಡ್ಕರ್ ಅವರನ್ನು ದಲಿತರಿಗಷ್ಟೇ ಸೀಮಿತಗೊಳಿಸುವ ಮನೋಭಾವ ಒಳ್ಳೆಯದಲ್ಲ. ನಮ್ಮ ದೇಶದ ಅಂದಿನ ಪರಿಸ್ಥಿತಿಯನ್ನು ಎಲ್ಲ ದೃಷ್ಟಿಕೋನದಿಂದ ಅವಲೋಕಿಸಿ ಈ ಸಮಾಜ ಮುಂದೆ ಹೇಗಿರುತ್ತದೆ ಎಂಬುದನ್ನು ಆಲೋಚಿಸಿ ಎಲ್ಲರೂ ಸುಭಿಕ್ಷವಾಗಿ ಬಾಳುವಂತಹ ದೇಶಕ್ಕೆ ಸರಿ ಹೊಂದುವಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು.

ಏಕ ವ್ಯಕ್ತಿಯ ಒತ್ತಾಯ ಪೂರ್ವಕ ಸಂವಿಧಾನ ನಮ್ಮದಲ್ಲ. ಇಂದು ನೆಮ್ಮದಿಯಿಂದ ಎಲ್ಲರೂ ಬಾಳಲು ಸಂವಿಧಾನವೇ ಕಾರಣ. ಅಂಬೇಡ್ಕರ್ ಅವರು ಹಲವು ಹೋರಾಟಗಳನ್ನು ಸಂಘಟಿಸದಿದ್ದರೆ, ಸಾಮಾಜಿಕ ಸುಧಾರಣೆಗಳನ್ನು ಮಾಡದಿದ್ದರೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಅವಮಾನದ ಪರಿಸ್ಥಿತಿ ಎದುರಿಸಬೇಕಾಗಿತ್ತು ಎಂದರು.

ಅಂತಹ ಮಹಾನ್ ನಾಯಕರು ನೀಡಿರುವ ಶಾಶ್ವತ ಕೊಡುಗೆಗಳನ್ನು ನಾವೆಲ್ಲರೂ ಸ್ಮರಿಸಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರ ಕೊಡುಗೆಗಳನ್ನು ಎಲ್ಲರೂ ಪಡೆದಿದ್ದಾರೆ. ದೇಶದಲ್ಲಿರುವ ಶೇ 50 ರಷ್ಟು ಮಹಿಳೆಯರು, ಶೇ 25 ರಷ್ಟಿರುವ ಕಾರ್ಮಿಕರು
ಅವರನ್ನು ನಿತ್ಯ ಸ್ಮರಿಸಲೇಬೇಕು ಎಂದರು.

ಒಬ್ಬ ವ್ಯಕ್ತಿ ಒಂದು ಕುಟುಂಬದ ಒಳಿತಿಗಾಗಿ ಶ್ರಮಿಸಿದರೆ ಅವರ ಕಿರಿಯ ಪೀಳಿಗೆಯವರು ಅವರ ನಿಧನದ ನಂತರ ಸ್ಮರಿಸುತ್ತಾರೆ. ಅದೇ ರೀತಿ ದೇಶದ ಸರ್ವರ ಒಳಿತಿಗೆ ಶ್ರಮಿಸಿದ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸುವ ಪುಣ್ಯದ ದಿನವಾಗಿದೆ. ಜ್ಞಾನದ ಮೇರು ಪರ್ವತವಾಗಿದ್ದ ಅವರು ನಡೆದಾಡುವ ವಿಶ್ವಕೋಶ ಎಂದು ಗುಣಗಾನ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾತನಾಡಿ, ಅಸ್ಪೃಶ್ಯತೆ, ಅಸಮಾನತೆ ಇದ್ದಂತಹ ಕಾಲದಲ್ಲಿ ಸಮಾನತೆಗಾಗಿ ಹೋರಾಡಿದವರು ಬಿ.ಆರ್.ಅಂಬೇಡ್ಕರ್. ಪ್ರಪಂಚವೇ ಅವರ ಜ್ಞಾನವನ್ನು ಕೊಂಡಾಡುತ್ತಿದೆ. ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟರು ಎಂದು ಬಣ್ಣಿಸಿದರು.

ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಅಂಬೇಡ್ಕರ್ ಅವರು ಕೊಡುಗೆ ನೀಡದ ಕ್ಷೇತ್ರವಿಲ್ಲ. ಅವರ ಚಿಂತನೆ, ಆದರ್ಶಗಳನ್ನು ಎಲ್ಲರೂ ಅರಿತು ಅನುಸರಿಸುವುದೇ ನಿಜವಾದ ಪುಣ್ಯ ಸ್ಮರಣೆ ಎಂದು ತಿಳಿಸಿದರು.

ಉಪನ್ಯಾಸಕ ಮಧುಸೂದನ್ ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವಿವಿಧ ದಲಿತ ಸಂಘಟನೆಗಳ ಮುಖಂಡರು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT