ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ರಾಜಕೀಯ ಶಕ್ತಿ ಅಗತ್ಯ: ಪಕ್ಷೇತರ ಅಭ್ಯರ್ಥಿ ಕೆ.ಎಂ.ಸುರೇಶ್

ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವಿನ ವಿಶ್ವಾಸ
Last Updated 17 ಅಕ್ಟೋಬರ್ 2020, 14:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅನೇಕ ವರ್ಷಗಳಿಂದ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆ ಕುರಿತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಪಂದಿಸುತ್ತ ಬಂದಿರುವೆ. ಆದ್ದರಿಂದ ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರ ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಂ.ಸುರೇಶ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರುದ್ಯೋಗಿ ಪದವೀಧರರು ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಹೇಳಿದರು.

‘ಒಂದೊಮ್ಮೆ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಿರುದ್ಯೋಗಿ ಪದವೀಧರರಿಗೆ ಉದ್ಯೋಗಗಳನ್ನು ಕಲ್ಪಿಸುವುದು, ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ಕೊಡಿಸುವುದು, ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದಿದ ಸರ್ಕಾರಿ ನೌಕರರ ಸೇವೆ ಪರಿಗಣಿಸುವ ಕೆಲಸ ಆದ್ಯತೆ ಮೆರೆಗೆ ಮಾಡುವೆ’ ಎಂದರು.

‘ಅನುದಾನಿತ ನೌಕರರಿಗೆ ಸಂಬಂಧಿಸಿದಂತೆ ಅನುದಾನ ರಹಿತ ಸೇವೆ ಪರಿಗಣಿಸುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ನೀಡಿದ ವರದಿ ಪ್ರಕಾರ 2006 ಏಪ್ರಿಲ್ 1ರ ಹಿಂದೆ ಸೇವೆಗೆ ಸೇರಿ ಮೊದಲು ಹಾಗೂ ನಂತರ ಅನುದಾನಕ್ಕೊಳಪಟ್ಟವರಿಗೆ ವೇತನ ನಿಗದಿ ಹಾಗೂ ಹಳೆ ಪಿಂಚಣಿ ಮಂಜೂರಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘2006 ಏಪ್ರಿಲ್ 1 ರ ನಂತರ ನೇಮಕವಾದ ಸರ್ಕಾರಿ ಹಾಗೂ ಅನುದಾನಿತ ಸಿಬ್ಬಂದಿಗೆ ಈ ಹಿಂದೆ ಇದ್ದ ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕು. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳ ಹುದ್ದೆ ಖಾಲಿಯಾದ ತಕ್ಷಣ ಭರ್ತಿ ಮಾಡಿಕೊಳ್ಳಲು ಅನುಮತಿ ಕೊಡಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ’ ಎಂದು ತಿಳಿಸಿದರು.

‘ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು. ಅನುದಾನಕ್ಕೆ ಒಳಪಡಿಸುವವರೆಗೆ ಸರ್ಕಾರಿ, ಅನುದಾನಿತ ನೌಕರರಂತೆ ಸೇವಾ ಭದ್ರತೆ ಒದಗಿಸುವುದು. ಕೇಂದ್ರ ಮಾದರಿ ವೇತನವನ್ನು ರಾಜ್ಯ ನೌಕರರಿಗೂ ವಿಸ್ತರಿಸಲು ಹೋರಾಟ. ಕಾಲಮಿತಿ ಬಡ್ತಿ, ಸಮಯಕ್ಕೆ ಸರಿಯಾಗಿ ವೇತನ, ಕಡತ ವಿಲೇವಾರಿ ಹಾಗೂ ಇತರೆ ಬೇಡಿಕೆಗಳನ್ನು ಕೂಡಲೇ ಮಂಜೂರು ಮಾಡುವುದು, ವರ್ಗಾವಣೆಯನ್ನು ನಿಗದಿತ ಸಮಯದಲ್ಲಿ ಹಾಗೂ ಸರಳೀಕರಣಗೊಳಿಸುವ ಗುರಿ ಹೊಂದಿದ್ದೇನೆ’ ಎಂದರು.

‘ಕಳೆದ 25-30 ವರ್ಷಗಳಿಂದ ನಿರುದ್ಯೋಗ ಪದವೀಧರರ ಸಮಸ್ಯೆ ಪರಿಹಾರಕ್ಕೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಸಮಸ್ಯೆ ಪರಿಹಾರಕ್ಕೆ ಮತದಾರರು ನನಗೆ ಈ ಚುನಾವಣೆಯಲ್ಲಿ ರಾಜಕೀಯ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT