ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ನಗರದಲ್ಲಿ ಡ್ರೋಣ್ ಕಣ್ಗಾವಲಿಗೆ ಚಿಂತನೆ

ಸೀಲ್‌ಡೌನ್‌ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚಳ, ಭಾನುವಾರ ಡ್ರೋಣ್‌ ನಿಗಾ ವ್ಯವಸ್ಥೆ ಪ್ರಾಯೋಗಿಕ ಪರಿಶೀಲನೆ
Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಿಧಿಸಲಾದ ಸೀಲ್‌ಡೌನ್‌ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಪೊಲೀಸ್‌ ಇಲಾಖೆ ನಗರದ ಮೇಲೆ ಡ್ರೋಣ್‌ ಕಣ್ಗಾವಲು ಇರಿಸಿ, ಅನವಶ್ಯಕವಾಗಿ ಹೊರಗೆ ಬರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ.

ನಗರದಲ್ಲಿ ಭಾನುವಾರ ಎಸ್ಪಿ ಮಿಥುನ್ ಕುಮಾರ್ ಅವರು ಡ್ರೋಣ್‌ ಕಣ್ಗಾವಲು ವ್ಯವಸ್ಥೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಪರಿಶೀಲನೆ ನಡೆಸಿದರು.

ನಗರದಲ್ಲಿ ನಾಲ್ಕು ಕೋವಿಡ್‌ ಪ್ರಕರಣಗಳು ವರದಿಯಾಗಿ, ಒಬ್ಬ ವ್ಯಕ್ತಿ ಬಲಿಯಾದ ಬೆನ್ನಲ್ಲೇ ಜಿಲ್ಲಾಡಳಿತ ನಗರದ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಜಾರಿಗೊಳಿಸಿ, ಜನರ ಓಡಾಟಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ.

ನಗರದ ಪ್ರತಿ ವಾರ್ಡ್‌ಗೆ ತಲಾ ಒಬ್ಬ ನೋಡಲ್ ಅಧಿಕಾರಿ, ಕೆಲ ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಇವರ ಮೂಲಕ ಜನರು ದಿನಸಿ, ತರಕಾರಿ, ಹಾಲು, ಔಷಧಿಯಂತಹ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವಂತೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ.

ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನೋಡಲ್‌ ಅಧಿಕಾರಿ ವಾರ್ಡ್‌ವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿದ್ದು, ಅದರ ಮೂಲಕ ನಾಗರಿಕರ ಬೇಕು, ಬೇಡಗಳನ್ನು ಅರಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ನಗರದಲ್ಲಿ ಸಾರ್ವಜನಿಕರಿಗೆ ಮನೆಯಿಂದ ಹೊರಬಾರದಂತೆ ನಗರಸಭೆ ನಾಲ್ಕು ಆಟೊಗಳ ಮೂಲಕ ಪ್ರಚಾರ ಕಾರ್ಯ ನಡೆಸಿದ್ದು, ಅನಾವಶ್ಯಕವಾಗಿ ತಿರುಗಾಡುವವರ ನಿಯಂತ್ರಣಕ್ಕಾಗಿ ನಗರದಾದ್ಯಂತ 800 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಇಷ್ಟಾಗಿಯೂ, ಮನೆಯಿಂದ ಹೊರಗೆ ಬರಬೇಡಿ ಎಂದು ಪದೇ ಪದೇ ಜನರಿಗೆ ಅರಿವು ಮೂಡಿಸುತ್ತಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದು, ಮುಖ್ಯ ಕೆಲಸಕ್ಕಾಗಿ ಹೊರಗೆ ಬರುತ್ತಿರುವವರಿಗೂ ತುಂಬಾ ತೊಂದರೆಯಾಗುತ್ತಿದೆ. ಅನವಶ್ಯಕವಾಗಿ ಪದೇ ಪದೇ ಓಡಾಡುತ್ತಿದವರನ್ನು ಪತ್ತೆ ಹಚ್ಚಲು ಇದೀಗ ಪೊಲೀಸರು ಡ್ರೋಣ್‌ ಮೊರೆ ಹೋಗಿದ್ದಾರೆ.

ಅದಕ್ಕಾಗಿ ಬೆಂಗಳೂರಿನ ಕೆಲ ಯುವ ತಂತ್ರಜ್ಞರ ಸಹಾಯ ಪಡೆದು ಭಾನುವಾರ ನಗರಕ್ಕೆ ಡ್ರೋಣ್‌ ತರಿಸಿ ಪರೀಕ್ಷೆ ನಡೆಸಲಾಯಿತು. ಸೀಲ್‌ಡೌನ್‌ ಕೊನೆಗೊಳ್ಳುವವರೆಗೆ ನಗರದಲ್ಲಿ ನಿಗಾ ಇಡಲು ಡ್ರೋಣ್‌ ನೆರವು ನೀಡುವಂತೆ ಪೊಲೀಸ್‌ ಅಧಿಕಾರಿಗಳು ಬೆಂಗಳೂರಿನ ತಂತ್ರಜ್ಞರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

’ಪ್ರತಿದಿನ ಬೆಳಿಗ್ಗೆ ನಗರದಲ್ಲಿ ಕೆಲ ಗಂಟೆಗಳ ಕಾಲ ಡ್ರೋಣ್‌ ಕ್ಯಾಮೆರಾ ಮೂಲಕ ಜನರ ಓಡಾಟ ಚಿತ್ರೀಕರಿಸಿ, ಅನಾವಶ್ಯಕವಾಗಿ ಮನೆಯಿಂದ ಹೊರಬರುವವರನ್ನು ಪತ್ತೆ ಮಾಡಿ, ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುತ್ತೇವೆ‘ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ 16 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಸೋಂಕಿತರ ಪೈಕಿ ಎಂಟು ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪ್ರತ್ಯೇಕ ಕ್ವಾರಂಟೈನ್‌ನಲ್ಲಿದ್ದಾರೆ. ಆರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT