ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಮದ್ದಿನ ಮನೆ ಪುನರುಜ್ಜೀವನ, ನಂದಿಬೆಟ್ಟದ ಮೇಲೆ 12 ಫಿರಂಗಿಗಳ ದರ್ಶನ

Last Updated 6 ಫೆಬ್ರುವರಿ 2021, 3:53 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮದ್ದಿನ ಮನೆ ಎಂದ ತಕ್ಷಣ ನಮಗೆ ತಟ್ಟನೆ ನೆನಪಿಗೆ ಬರುವುದು ಟಿಪ್ಪುವಿನ ಫಿರಂಗಿಗಳ ಬಳಕೆ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ಯುದ್ಧಗಳು. ಬೆಂಗಳೂರನ್ನು ಹೊರತುಪಡಿಸಿ ಶ್ರೀರಂಗಪಟ್ಟಣ, ಮಧುಗಿರಿ, ಮಿಡಿಗೇಸಿ, ಪಾವಗಡ, ಮಂಜರಾಬಾದ, ರಾಯಕೋಟೆ, ಕೃಷ್ಣಗಿರಿ, ನಂದಿಬೆಟ್ಟ ಮುಂತಾದೆಡೆ ಟಿಪ್ಪು ಸುಲ್ತಾನ್ ನಿರ್ಮಿಸಿದ ಮದ್ದಿನ ಮನೆಗಳಿವೆ.

ನಂದಿಬೆಟ್ಟದಲ್ಲಿನ ಟಿಪ್ಪು ಸುಲ್ತಾನನ ಮದ್ದಿನ ಮನೆ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅದರ ಸುತ್ತ ಕಳೆಗಿಡಗಳು ಬೆಳೆದು ಒಳಗೆ ತ್ಯಾಜ್ಯದ ರಾಶಿ ತುಂಬಿಹೋಗಿತ್ತು. ಈಚೆಗೆ ಒಂದೆರಡು ತಿಂಗಳ ಹಿಂದೆ ಅದು ಪುನರುಜ್ಜೀವಗೊಂಡು ಪ್ರವಾಸಿಗರಿಗೆ ಇತಿಹಾಸದ ಪಾಠವನ್ನು ಹೇಳುವಂತಾಗಿದೆ. ಅದಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ಅದರ ಬಾಗಿಲಿನ ಮೇಲೆ ಕತ್ತಿಗಳು ಹಾಗೂ ಗುರಾಣಿಯನ್ನು ಸಂರಕ್ಷಿಸಲಾಗಿದೆ. ಸುತ್ತ ಕಬ್ಬಿಣದ ಬೇಲಿಯನ್ನು ಸಹ ಹಾಕಲಾಗಿದೆ. ಸ್ವಚ್ಛ ಪರಿಸರದ ನಿರ್ಮಾಣವಾಗಿದೆ.

‘ಯುನೈಟೆಡ್ ವೇ ಬೆಂಗಳೂರು’ ಎಂಬ ಸ್ವಯಂಸೇವಾ ಸಂಸ್ಥೆಯವರು ಸುಮಾರು ಮೂರು ಲಕ್ಷ ವೆಚ್ಚದಲ್ಲಿ ಟಿಪ್ಪು ಸುಲ್ತಾನನ ಮದ್ದಿನ ಮನೆ ಅಥವಾ ಶಸ್ತ್ರಾಸ್ತ್ರ ಸಂಗ್ರಹಗಾರವನ್ನು ನವೀಕರಿಸಿದ್ದಾರೆ. ಪ್ರತಿದಿನ ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಸಹ ಮಾಡುತ್ತಾರೆ. ಶಸ್ತ್ರಾಸ್ತ್ರ ಸಂಗ್ರಹಗಾರವನ್ನು ಪುನರುಜ್ಜೀವಗೊಳಿಸಿರುವುದರಿಂದ ಐತಿಹಾಸಿಕ ಮಹತ್ವದ ತಾಣವೊಂದು ಸಂರಕ್ಷಿಸಿದಂತಾಗಿದೆ’ ಎಂದು ನಂದಿಬೆಟ್ಟದ ತೋಟಗಾರಿಕಾ ವಿಶೇಷ ಅಧಿಕಾರಿ ಗೋಪಾಲ್ ತಿಲಿಸಿದರು.

‘ಟಿಪ್ಪು ಸುಲ್ತಾನ್ ನಿರ್ಮಿಸಿದ ಮದ್ದಿನ ಮನೆ ಬೆಂಗಳೂರಿನ ಕಲಾಸಿಪಾಳ್ಯದ ಬಳಿಯ ಬೆಂಗಳೂರು ಮೆಡಿಕಲ್ ಕಾಲೇಜು ಹಿಂಭಾಗದಲ್ಲಿದೆ. ಮದ್ದಿನ ಮನೆ ಮೂಲತಃ ಸ್ಫೋಟಕ ಸಾಧನಗಳ ಶೇಖರಣೆಯಾಗಿದ್ದು, ಸುರಕ್ಷಿತವಾಗಿ ಇರಿಸಲು ಇದನ್ನು ಬಂಕರ್ ಮಾದರಿಯಲ್ಲಿ ನೆಲದಡಿಯಲ್ಲಿ ನಿರ್ಮಿಸಲಾಗಿದೆ. ಹಲವಾರು ಕೋಟೆ ಕೊತ್ತಲಗಳನ್ನು ಅವರು ಪುನರ್ ರಚಿಸಿ ಫಿರಂಗಿಗಳನ್ನು ಅಳವಡಿಸಿದ್ದರು. ಅವುಗಳಲ್ಲಿ ನಂದಿದುರ್ಗವೂ ಒಂದು. ಫಿರಂಗಿಗಳಿಗೆ ಬೇಕಾದ ಮದ್ದನ್ನು ಶೇಖರಿಸುವುದು ಅವರಿಗೆ ಅವಶ್ಯಕವಾಗಿತ್ತು. ಮದ್ದಿನ ಮನೆಯನ್ನು ನಿರ್ಮಿಸುವಲ್ಲಿಯೂ ಹಲವಾರು ಎಚ್ಚರಿಕೆ ಕ್ರಮಗಳನ್ನು ಅವರು ಕೈಗೊಳ್ಳುತ್ತಿದ್ದರು’ ಎಂದು ಅವರು ಹೇಳಿದರು.

‘ದಕ್ಷಿಣ ಭಾರತದಲ್ಲಿ ಫಿರಂಗಿಗಳನ್ನು ಪಾಳೇಗಾರರ ಅಥವಾ ನಾಯಕರ ಆಳ್ವಿಕೆಯಲ್ಲಿ ಕೋಟೆ ಬುರುಜುಗಳಲ್ಲಿ ಅಳವಡಿಸಿ ಕೊಂಡಿರುತ್ತಿದ್ದರು. ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ರಣರಂಗಗಳಲ್ಲಿ ಚಿಕ್ಕಗಾತ್ರದ ಹಾಗೂ ಹೆಚ್ಚು ಶಕ್ತಿಶಾಲಿಯಾದ ಗಾಲಿಗಳ ಮೇಲೆ ಅಳವಡಿಸಿದ ಫಿರಂಗಿಗಳನ್ನು ಬಳಸಿದರು. ಈ ಶಕ್ತಿಶಾಲಿ ಫಿರಂಗಿಗಳಿಗೆ ಬೇಕಾದ ಸಿಡಿಮದ್ದನ್ನು ಶೇಖರಿಸುವುದು ಅತ್ಯವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಸಿಡಿಮದ್ದು, ಚಿಕ್ಕ ರಾಕೆಟ್ಟುಗಳನ್ನು ಶೇಖರಿಸಲು ಅವರು ಮದ್ದಿನ ಮನೆಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿರ್ಮಿಸಿದ್ದರು. ಬೆಂಗಳೂರಿನ ಮದ್ದಿನಮನೆ ಬಳಿ ಮೆಟ್ರೊ ನಿಲ್ದಾಣ ಕಾಮಗಾರಿ ನಡೆಸುವಾಗ ಎರಡು ಫಿರಂಗಿಗಳು ದೊರಕಿದ್ದವು. ನಂದಿಬೆಟ್ಟದ ಮೇಲೆ ಒಟ್ಟು 12 ಫಿರಂಗಿಗಳನ್ನು ನಾವಿಂದು ನೋಡಬಹುದಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT