ಸೋಮವಾರ, ಮಾರ್ಚ್ 8, 2021
22 °C
ವಿದ್ಯಾರ್ಥಿ ನಿಲಯ, ಮಾರುಕಟ್ಟೆಯಲ್ಲಿ ತಂಬಾಕು ಬಳಕೆ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು

ತಂಬಾಕಿನ ವ್ಯಸನ ಆರೋಗ್ಯಕ್ಕೆ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದಲ್ಲಿ ಶುಕ್ರವಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ದಂಡ ವಿಧಿಸುವ ಜತೆಗೆ ತಂಬಾಕು ನಿಷೇಧ ಕಾಯ್ದೆ ಅರಿವು ಮೂಡಿಸಿದರು.

ಎಂ.ಜಿ.ರಸ್ತೆಯಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ 14 ಜನರಿಗೆ ದಂಡ ವಿಧಿಸಿದ ಆರೋಗ್ಯ ಸುರಕ್ಷತಾ ವಿಭಾಗದ ತಂಡವು, ವಿಶೇಷವಾಗಿ ಜೈಬೀಮ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ ತಂಬಾಕು ಬಳಕೆ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ ಮೂಡಿಸಿತು.

ಈ ವೇಳೆ ಮಾತನಾಡಿದ ಆಹಾರ ಸುರಕ್ಷತಾ ತಾಲ್ಲೂಕು ಅಧಿಕಾರಿ ಜಿ.ಹರೀಶ್‌, ‘ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿದ್ದರೂ ಅರಿವಿನ ಕೊರತೆಯಿಂದಾಗಿ ಜನನಿಬಿಡ ಪ್ರದೇಶಗಳಲ್ಲಿಯೇ ಹೆಚ್ಚಾಗಿ ತಂಬಾಕು ನಿಷೇಧ ಕಾಯ್ದೆಯನ್ನು ಉಲ್ಲಘನೆಯಾಗುತ್ತಿದೆ’ ಎಂದು ತಿಳಿಸಿದರು.

‘ಮಾದಕ ವಸ್ತುಗಳ ಬಳಕೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ನಡುವೆಯೂ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ. ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ವ್ಯಕ್ತಿಯು ಕಾಲ ಕ್ರಮೇಣ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ದುಶ್ಚಟಗಳಿಗೆ ಬಲಿಯಾದವರು ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡರೆ ಮುಂದಾಗುವ ಹಾನಿಯಿಂದ ತಪ್ಪಿಸಿಕೊಳ್ಳಬಹುದು’ ಹೇಳಿದರು.

‘ಮದ್ಯ, ಮಾದಕ, ತಂಬಾಕು ವಸ್ತುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಮಾದಕ ವ್ಯಸನಗಳಿಗೆ ಅಂಟಿಕೊಂಡರೆ ಅವುಗಳನ್ನು ಬಿಡುವುದು ಸುಲಭವಲ್ಲ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ಲಭ್ಯವಿದೆ’ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಸುಧಾ, ಕಾನ್‌ಸ್ಟೆಬಲ್‌ಗಳಾದ ಕೃಷ್ಣಮೂರ್ತಿ, ಮಂಜುನಾಥ್, ದೇವರಾಜು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು