ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಟೊಮೆಟೊ ಬೆಲೆ ಏರಿಕೆ: ಮಂದಹಾಸ

15 ಕೆ.ಜಿ ಬಾಕ್ಸ್‌ಗೆ ₹700-ರಿಂದ 1,100ವರೆಗೂ ಮಾರಾಟ
Last Updated 18 ನವೆಂಬರ್ 2021, 4:29 IST
ಅಕ್ಷರ ಗಾತ್ರ

ಚಿಂತಾಮಣಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ಚೇತರಿಸಿಕೊಂಡು ಏರಿಕೆ ಕಾಣುತ್ತಿದೆ. ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಸುಮಾರು 20 ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದ ಬೆಳೆಗಳು ಹಾಳಾಗಿ ಮಾರುಕಟ್ಟೆಗೆ ಹಣ್ಣು ಆವಕ ಕಡಿಮೆಯಾಗಿದೆ.

ಬುಧವಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಗುಣಮಟ್ಟಕ್ಕೆ ಅನುಗುಣವಾಗಿ ₹700-1,100ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ₹70-100ವರೆಗೂ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಕಾಲದಲ್ಲಿ ಆಯ್ದು ಬಿಸಾಡುತ್ತಿದ್ದ ಟೊಮೆಟೊಗೂ ಬಾಕ್ಸ್‌ಗೆ ₹700ಬೆಲೆ ಸಿಗುತ್ತಿದೆ.

ಒಂದು ತಿಂಗಳಿನಿಂದ ದಿನ-ದಿನವೂ ಬೆಲೆ ಏರಿಕೆಯಾಗುತ್ತಿದೆ. ತಿಂಗಳಿನಿಂದ ಮಳೆಯಾಗುತ್ತಿರುವುದರಿಂದ ಟೊಮೆಟೊ ತೋಟಗಳು ಹಾಳಾಗಿವೆ. ತೋಟಗಳಲ್ಲಿ ನೀರು ನಿಂತು ತೇವಾಂಶ ಅಧಿಕವಾಗಿ ಗಿಡಗಳು ಹಾಗೂ ಅವುಗಳಲ್ಲಿದ್ದ ಹಣ್ಣುಗಳು ಕೊಳೆತು ನಾರುತ್ತಿವೆ. ಎತ್ತರದ ಪ್ರದೇಶ, ಗಡಸು ಭೂಮಿಗಳಲ್ಲಿ ಬೆಳೆದ ಟೊಮೆಟೊ ಮಾತ್ರ ಅಲ್ಪ-ಸ್ವಲ್ಪ ಉಳಿದುಕೊಂಡಿದ್ದು ಮಾರುಕಟ್ಟೆಗೆ ಬರುತ್ತಿದೆ.

ಎರಡು ವರ್ಷಗಳಿಂದ ಟೊಮೆಟೊಗೆ ಉತ್ತಮ ಧಾರಣೆ ಸಿಕ್ಕಿರಲಿಲ್ಲ. ಜೂನ್-ಜುಲೈ ತಿಂಗಳಲ್ಲಿ ಬೆಲೆ ಕುಸಿದಿದ್ದು 15 ಕೆ.ಜಿ ₹30-110ಕ್ಕೆ ಮಾರಾಟವಾಗುತ್ತಿತ್ತು. ಹಣ್ಣನ್ನು ಕಿತ್ತು ಮಾರುಕಟ್ಟೆಗೆ ಸಾಗಾಟ ಮಾಡುವ ವೆಚ್ಚವೂ ದೊರೆಯುತ್ತಿರಲಿಲ್ಲ. ಅನೇಕ ರೈತರು ಹಣ್ಣನ್ನು ಕೊಯ್ಲು ಮಾಡದೆ ತೋಟಗಳಲ್ಲೇ ಬಿಟ್ಟಿದ್ದರು. ಗಿಡಗಳ ಸಮೇತ ಉಳುಮೆ ಮಾಡಿ ಮಣ್ಣಿಗೆ ಸೇರಿಸಿದ್ದರು. ಕಂಗಾಲಾಗಿದ್ದ ರೈತರು ಟೊಮೆಟೊ ಬೆಳೆಗೆವಿದಾಯ ಹೇಳಿ ಬೇರೆ ಬೆಳೆಗಳಿಗೆಮಾರುಹೋಗಿದ್ದರು.

ನದಿ, ನಾಲೆ ಸೇರಿದಂತೆ ಯಾವುದೇ ಶಾಶ್ವತನೀರಾವರಿ ಮೂಲಗಳಿಲ್ಲ. ಅಂತರ್ಜಲ ತೀವ್ರವಾಗಿ ಕುಸಿದಿದೆ. 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಗುವ ಅಲ್ಪ-ಸ್ವಲ್ಪ ನೀರಿನಿಂದಲೇ ಶ್ರಮಪಟ್ಟು ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ರೈತರು ನಾಲ್ಕು ಕಾಸು ಸಂಪಾದನೆ ಮಾಡುತ್ತಾರೆ.

ನಿರಂತರವಾಗಿ ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಮಳೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತೋಷ ತಂದಿದೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಟೊಮೆಟೊ ಬೆಲೆ ತೀವ್ರ ಕುಸಿತದಿಂದ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲೇ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಇಲ್ಲಿನ ಎಪಿಎಂಸಿಯಲ್ಲಿ ಯಾವಕಡೆಗೆ ದೃಷ್ಟಿ ಹಾಯಿಸಿದರೂ ಟೊಮೆಟೊ ರಾಶಿಗಳು ಕಾಣುತ್ತಿದ್ದವು.

ಪ್ರತಿನಿತ್ಯ ಸುಮಾರು 70-80 ಲೋಡ್ ಪೂರೈಕೆ ಆಗುತ್ತಿತ್ತು. ಈಗ ಕೇವಲ 20 ಲೋಡ್‌ಗೆ ಇಳಿದಿದೆ. ದೆಹಲಿ, ಲಕ್ನೋ, ಕಾನ್ಪುರ, ಬನಾರಸ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ವಿಜಯವಾಡಕ್ಕೆ ರವಾನೆಯಾಗುತ್ತಿದೆ ಹಾಗೂ ಸ್ಥಳೀಯವಾಗಿ ಮಾರಾಟವಾಗುತ್ತಿದೆ ಎಂದು ಪ್ರಮುಖ ಟೊಮೆಟೊ ವ್ಯಾಪಾರಿ ಊಲವಾಡಿ ವಿ.ಕೃಷ್ಣಪ್ಪ ತಿಳಿಸಿದರು.

ಅಪರೂಪಕ್ಕೊಮ್ಮೆ ಬೆಲೆ ಸಿಗುತ್ತದೆ. ಬೆಳೆ ಉತ್ತಮವಾಗಿದ್ದು ಇಳುವರಿ ಚೆನ್ನಾಗಿದ್ದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಇಲ್ಲದೆ ರೈತರು ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಬೆಳೆಗಾರರೂ ಕಡಿಮೆ, ಮಳೆಯಿಂದ ಬೆಳೆ ಹಾಳಾಗಿದೆ. ಹೀಗಾಗಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ ಎನ್ನುತ್ತಾರೆ ರೈತ ಸಂಘದ ಮುಖಂಡ ಸೀಕಲ್ ರಮಣಾರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT