ಶನಿವಾರ, ಜುಲೈ 31, 2021
25 °C
25ಕ್ಕೂ ಹೆಚ್ಚು ಪ್ರಮುಖ ಬೆಟ್ಟಗಳು;

ಚಾರಣಿಗರಿಗೆ ನೆಚ್ಚಿನ ಜಿಲ್ಲೆ ಚಿಕ್ಕಬಳ್ಳಾಪುರ: ಹಳಿಗೆ ಬಾರದ ಪ್ರವಾಸೋದ್ಯಮ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಲಾಕ್‌ಡೌನ್ ತೆರವಾಗಿದೆ. ಹಂತಹಂತವಾಗಿ ಎಲ್ಲ ಕ್ಷೇತ್ರ ಗಳು ಚೇತರಿಕೆಯ ಹಾದಿಯಲ್ಲಿ ಸಾಗಿವೆ. ಆದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯ ಹಾದಿಯನ್ನು ಕಾಣುತ್ತಿಲ್ಲ. ಇಲಾಖೆಯ ಅಧಿಕಾರಿಗಳ ಪ್ರಕಾರ ಕೋವಿಡ್ ಪೂರ್ವದಲ್ಲಿದ್ಧ ಸ್ಥಿತಿಗೆ ಬರಲು ಇನ್ನೂ ಆರು ತಿಂಗಳಾದರೂ ಬೇಕು.

ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ ಬೆಟ್ಟಗಳು, ಕೋಟೆಗಳು, ದೇಗುಲಗಳು ಸೇರಿದಂತೆ ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಇವೆ. ಬೆಂಗಳೂರಿಗೆ ಸಮೀಪ ದಲ್ಲಿರುವ ಜಿಲ್ಲೆಗೆ ಚಾರಣಕ್ಕಾಗಿಯೇ ಹೆಚ್ಚು ಜನರು ಬರುವರು.

ನಂದಿಗೂ ಇಳಿಕೆ: ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದಾದ ನಂದಿ ಗಿರಿ ಧಾಮವೇ ಜಿಲ್ಲೆಯ ಪ್ರವಾಸೋದ್ಯಮದ ಮುಕುಟ ಮಣಿ. ಬೆಂಗಳೂರಿನ ಐಟಿ, ಬಿಟಿ ಕ್ಷೇತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವುದು ಮತ್ತು ಈ ವಲಯದವರು ಇನ್ನೂ ಮನೆಗಳಲ್ಲಿಯೇ ಕೆಲಸ ಮಾಡು ತ್ತಿರುವುದು ನಂದಿಗಿರಿಧಾಮ ಸೇರಿದಂತೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ.

ಶನಿವಾರ ಮತ್ತು ಭಾನುವಾರ ಎರಡೇ ದಿನಗಳಲ್ಲಿ 20ರಿಂದ 25 ಸಾವಿರ ಪ್ರವಾಸಿಗರು ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈಗ ಈ ಎರಡೂ ದಿನಗಳು ಸೇರಿ 4 ಸಾವಿರ ಪ್ರವಾಸಿಗರು ದಾಟುತ್ತಿಲ್ಲ.

ಮನೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕಚೇರಿಗಳತ್ತ ಮುಖ ಮಾಡಿದರೆ ನಂದಿಗೂ ಹೆಚ್ಚು ಪ್ರವಾಸಿಗರು ಬರುವರು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಕೋಟೆಗಳನ್ನು ಏರುವವರಿಲ್ಲ: ಚಿಕ್ಕಬಳ್ಳಾಪುರ ಜಿಲ್ಲೆ ಬೆಟ್ಟಗಳು ನಾಡು ಎಂದೇ ಪ್ರಸಿದ್ಧಿ. ಸ್ಕಂದಗಿರಿ, ಗೋವರ್ಧನಗಿರಿ ಬೆಟ್ಟ, ಆವುಲಬೆಟ್ಟ, ಗುಡಿಬಂಡೆಯ ಸುರಸ್ಮಗಿರಿ ಕೋಟೆ, ಕೈವಾರದ ದುರ್ಗಿಬೆಟ್ಟ, ದೇವಿಕುಂಟೆ ಬೆಟ್ಟ ಹೀಗೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಬೆಟ್ಟಗಳು, ಆ ಬೆಟ್ಟಗಳಲ್ಲಿ ಕೋಟೆಗಳು ಇವೆ. ಬೆಟ್ಟಗುಡ್ಡಗಳ ಜಿಲ್ಲೆಗೆ ಚಾರಣಪ್ರಿಯರು ಹೇರಳವಾಗಿಯೇ ಬರುತ್ತಿದ್ದರು. ಆದರೆ ಈಗ ಈ ಕೋಟೆಗಳು, ಬೆಟ್ಟಗುಡ್ಡಗಳಲ್ಲಿ ಜನರ ಸುಳಿದಾಟ ತೀರಾ ಕಡಿಮೆ ಇದೆ.

ಸಣ್ಣ ವ್ಯಾಪಾರಿಗಳಿಗೆ ಪೆಟ್ಟು: ನಂದಿ ಸೇರಿದಂತೆ ಜಿಲ್ಲೆಯ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿರುವುದು ಸ್ಥಳೀಯ ವ್ಯಾಪಾರಿಗಳಿಗೂ ಪೆಟ್ಟು ನೀಡಿದೆ. ವಾಹನಗಳು, ಹೋಟೆಲ್, ಕರಕುಶಲ ಉದ್ದಿಮೆ ಹೀಗೆ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು