ಸ್ಕಂದಗಿರಿಯಲ್ಲಿ ಹೆಚ್ಚಿದ ಚಾರಣಿಗರ ಕಲರವ

7
ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜೈವಿಕ ಪ್ರವಾಸೋದ್ಯಮಕ್ಕೆ ಉತ್ತೇಜನ, ಬೆಟ್ಟಕ್ಕೆ ಮುಗಿಬೀಳುತ್ತಿರುವ ನಗರಗಳ ಜನ

ಸ್ಕಂದಗಿರಿಯಲ್ಲಿ ಹೆಚ್ಚಿದ ಚಾರಣಿಗರ ಕಲರವ

Published:
Updated:

ಚಿಕ್ಕಬಳ್ಳಾಪುರ: ಚಾರಣಿಗರ ಸ್ವರ್ಗ ಎನಿಸಿಕೊಂಡಿರುವ ತಾಲ್ಲೂಕಿನ ಸ್ಕಂದಗಿರಿಯಲ್ಲಿ (ಕಳವಾರ ಬೆಟ್ಟ) ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಚಾರಣಕ್ಕೆ ಚಾಲನೆ ದೊರೆತಿದೆ. ಬೆಟ್ಟದಲ್ಲಿ ಚಾರಣಿಗರ ಕಲರವ ಹೆಚ್ಚಿದೆ.

ಸ್ಕಂದಗಿರಿಯಲ್ಲಿ ಈ ಹಿಂದೆ ಆಗಾಗ ಚಾರಣಿಗರು ದಾರಿ ತಪ್ಪಿ ಕಷ್ಟಕ್ಕೆ ಸಿಲುಕುತ್ತಿದ್ದರು. ಅರಣ್ಯ ಇಲಾಖೆ ಬೆಟ್ಟ ಪ್ರವೇಶ ನಿರ್ಬಂಧಿಸಿತ್ತು. ಜಿಲ್ಲೆಯ ಜೈವಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಸ್ಕಂದಗಿರಿ ಮತ್ತು ಗುಡಿಬಂಡೆ ತಾಲ್ಲೂಕಿನ ಆವಲಬೆಟ್ಟದಲ್ಲಿ ‘ಚಾರಣ ಪಥ’ಗಳನ್ನು (ಎಕೋಟ್ರೇಲ್ಸ್) ಗುರುತಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಈ ಬೆಟ್ಟಗಳನ್ನು ಅರಿಸಿ ಬರುವವರ ಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ‘ಸಿಲಿಕಾನ್ ಸಿಟಿ’ಯಲ್ಲಿ ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಹೊರ ರಾಜ್ಯಗಳ ಐಟಿ ಉದ್ಯೋಗಿಗಳಿಗಂತೂ ಈ ಬೆಟ್ಟ ಅಚ್ಚುಮೆಚ್ಚಿನ ತಾಣವಾಗಿದೆ.

‘ಸ್ಕಂದಗಿರಿಯ ಚಾರಣ ವ್ಯವಸ್ಥೆಗಾಗಿ ಕಳವಾರ ಗ್ರಾಮದ ಬಳಿಯ ಪಾಪಾಗ್ನಿ ಮಠದ ಹಿಂದೆ 200 ಮೀಟರ್‌ ಅಂತರದಲ್ಲಿ ಅರಣ್ಯ ಇಲಾಖೆ ವಿಚಾರಣಾ ಕೇಂದ್ರ ತೆರೆದು, ನಾಲ್ಕು ಮಾರ್ಗದರ್ಶಕರನ್ನು ನಿಯೋಜಿಸಿದೆ. ಅಲ್ಲಿಂದಲೇ ಚಾರಣ ಆರಂಭಗೊಳ್ಳುತ್ತದೆ. ಸದ್ಯ ಸಾಮಾನ್ಯ ದಿನಗಳಲ್ಲಿ 50ರಿಂದ 60, ವಾರಾಂತ್ಯದಲ್ಲಿ 100ಕ್ಕೂ ಅಧಿಕ ಜನರು ಚಾರಣಕ್ಕೆ ಬರುತ್ತಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ವಿಕ್ರಂ ರೆಡ್ಡಿ ಹೇಳಿದರು.

‘ಸ್ಕಂದಗಿರಿಯ ಚಾರಣ ಪಥ 3 ಕಿ.ಮಿ.ನಷ್ಟಿದ್ದು ಚೆನ್ನಾಗಿ ನಡೆಯುವವರಿದ್ದರೆ ಎರಡು ಗಂಟೆಗಳಲ್ಲಿ ಚಾರಣ ಮುಗಿಸಬಹುದು. ಚಾರಣಕ್ಕೆ ಬೆಳಿಗ್ಗೆ 5 ರಿಂದ ಸಂಜೆ 5ರ ವರೆಗೆ ಅವಕಾಶವಿದೆ. ಆನ್‌ಲೈನ್ ಬುಕ್ಕಿಂಗ್‌ ಮಾಡಿಸಿಕೊಂಡು ಬರುವ ಚಾರಣಿಗರನ್ನು 10 ಜನರಂತೆ ತಂಡಗಳನ್ನಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಬ್ಬ ಅನುಭವಿ ಮಾರ್ಗದರ್ಶಕನನ್ನು ನಿಯೋಜಿಸಲಾಗುತ್ತದೆ. ಸದ್ಯ ಸಂದ್ಕಗಿರಿ ಚಾರಣಕ್ಕೆ ಉತ್ತಮ ಸ್ಪಂದನೆ ಇದೆ’ ಎಂದರು.

‘ಚಾರಣಿಗರಿಗೆ ಮಾರ್ಗದರ್ಶಕರು ದಾರಿಯುದ್ದಕ್ಕೂ ಕಂಡುಬರುವ ಐತಿಹಾಸಿಕ ಸ್ಥಳ, ದೇವಸ್ಥಾನಗಳು, ಸುರ್ಯೋದಯ, ಸುರ್ಯಾಸ್ತಮಾನ ವೀಕ್ಷಣಾ ಸ್ಥಳಗಳು, ಪಕ್ಷಿ ವೈವಿಧ್ಯ ಪರಿಚಯಿಸಲಾಗುತ್ತದೆ. ಚಾರಣ ಪಥಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

‘ಸಾಹಸಿಗರಿಗೆ ಪಂಥಾಹ್ವಾನ ನೀಡುವ ಸಂದ್ಕಗಿರಿ ಚಾರಣ ನಿಜಕ್ಕೂ ಅನಿರ್ವಚನೀಯ. ಮೋಡಗಳನ್ನು ಹೊದ್ದು ಮಲಗಿದ ಗಿರಿ ಶಿಖರಗಳನ್ನು ನೋಡುತ್ತಿದ್ದರೆ ಬಾನಲ್ಲಿ ತೇಲಾಡಿದ ಅನುಭವವಾಗುತ್ತದೆ. ಬೆಂಗಳೂರಿನ ಐಟಿ ಮಂದಿಗಂತೂ ಸಂದ್ಕಗಿರಿ ವಾರಾಂತ್ಯ ಪ್ರವಾಸಕ್ಕೆ ಮೆಚ್ಚಿನ ತಾಣವಾಗಿದೆ. ಸ್ನೇಹಿತರಿಂದ ಕೇಳಿ ಕುತೂಹಲ ತಡೆಯಲಾರದೆ ಬಂದೆ. ಚಾರಣ ತುಂಬಾ ಖುಷಿ ಕೊಟ್ಟಿತು’ ಎಂದು ಎಂದು ಬೆಂಗಳೂರು ಖಾಸಗಿ ಕಂಪೆನಿ ಉದ್ಯೋಗಿ ಹೃತ್ವಿಕ್ ತಿಳಿಸಿದರು.

‘ಫೇಸ್‌ಬುಕ್‌ನಲ್ಲಿ ಸ್ನೇಹಿತರೊಬ್ಬರೂ ಹಾಕಿದ್ದ ಸ್ಕಂದಗಿರಿ ಚಿತ್ರಗಳನ್ನು ನೋಡಿ ಸ್ನೇಹಿತೆಯರೊಂದಿಗೆ ಸೇರಿ ಚಾರಣ ಯೋಜನೆ ಹಾಕಿಕೊಂಡೆವು. ಆನ್‌ಲೈನ್ ಬುಕ್ಕಿಂಗ್ ಮಾಡಿದೆವು. ಇಲ್ಲಿನ ಪರಿಸರ ತುಂಬಾ ರಮ್ಯವಾಗಿದೆ. ಬೆಂಗಳೂರಿಗೆ ಇದು ಹತ್ತಿರ ಇರುವುದರಿಂದ ಆಗಾಗ ಇಲ್ಲಿಗೆ ಬರಬಹುದು ಎನಿಸುತ್ತಿದೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ವಿದ್ಯಾ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !