ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಪಾರ್ಕ್‌ಗೆ ಟ್ರ್ಯಾಕ್ಟರ್‌ ಜಾಥಾ

Last Updated 21 ಜನವರಿ 2021, 1:46 IST
ಅಕ್ಷರ ಗಾತ್ರ

ಚಿಂತಾಮಣಿ: ‘ರೈತ ಹೋರಾಟಗಾರರು ಜ.26ರಂದು ಕರೆ ನೀಡಿರುವ ಟ್ರ್ಯಾಕ್ಟರ್‌ ಜಾಥಾಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಪೂರ್ಣವಾಗಿ ಬೆಂಬಲ ನೀಡಿ ಅಧಿಕ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌‌ಗಳು ಜಾಥಾದಲ್ಲಿ ಭಾಗವಹಿಸುತ್ತವೆ’ ಎಂದು ಕರ್ನಾಟಕ ರೈತ ಸಂಘ ಹಗೂ ಹೆಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ತಾಲ್ಲೂಕು ಘಟಕದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

‘ಕೃಷಿಗೆ ಹಾಗೂ ರೈತರಿಗೆ ಮಾರಕವಾದ ನೂತನ ಕೃಷಿ ಕಾಯ್ದೆ, ಭೂಸ್ವಾದೀನ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೆಪಿಟಿಸಿಎಲ್ ಖಾಸಗೀಕರಣವನ್ನು ವಿರೋಧಿಸಿ ಪಂಜಾಬ್ ಹಾಗೂ ದೆಹಲಿಯಲ್ಲಿ ರೈತರು ಕಳೆದ 60 ದಿನಗಳಿಂದ ಮಳೆ, ಗಾಳಿ, ಚಳಿ ಎನ್ನದೇ ಪ್ರತಿಭಟನೆಯನ್ನು ಮಾಡುತ್ತಿದ್ದರೂ ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ’ ಎಂದರು.

‘ರೈತರು ಚಳಿ, ಮಳೆ, ಗಾಳಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಒಂದು ಸಮಿತಿಯನ್ನು ಮಾಡಲಾಗಿದೆ. ಸಮಿತಿಯ ಸದಸ್ಯರಲ್ಲಿ ಕೆಲವರು ಹೊರನಡೆದಿದ್ದಾರೆ. ಕೆಲವು ಸದಸ್ಯರು ಹಿಂದೆ ಸರ್ಕಾರದ ಪರವಾಗಿ ಬೆಂಬಲ ನೀಡಿದ್ದರು. ಅವರಿಂದ ರೈತರಿಗೆ ಅನುಕೂಲವಾಗುವ ಸಂಭವ ಇಲ್ಲ’ ಎಂದರು.

‘ಭೂಸುಧಾರಣೆ, ಭೂಸ್ವಾಧೀನ, ಎಪಿಎಂಸಿ ಕಾಯ್ದೆಗಳು ಯಾರಿಗೆ ಬೇಕಾಗಿತ್ತು. ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಏಕೆ ಹಠ ಮಾಡುತ್ತಿದೆ. ಟ್ರ್ಯಾಕ್ಟರ್‌, ದ್ವಿಚಕ್ರ ವಾಹನಗಳಿಗೆ ರಾಷ್ಟ್ರಧ್ವಜ, ರೈತ ಧ್ವಜ ಕಟ್ಟಿಕೊಂಡು ಟ್ರ್ಯಾಕ್ಟರ್‌ ಜಾಥಾದಲ್ಲಿ ಭಾಗವಹಿಸುತ್ತೇವೆ’ ಎಂದರು.

ರೈತ ಮುಖಂಡರಾದ ಕತ್ತಿರಗುಪ್ಪೆ ಹಾಲು ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ವೈಸಿ ಜಯಣ್ಣ, ಮಂಜುಳಮ್ಮ, ಪಲ್ಲಿಗಡ್ಡ ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ವೆಂಕಟರಾಮರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT