ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ ಮೇಲೆ ಪ್ರಯಾಣ: ಸಂಕಷ್ಟದಲ್ಲಿ ಸಂಚಾರ

ಆಟೊಗಳಲ್ಲಿ ಅತಿ ಹೆಚ್ಚು ಜನರು; ಸಂಕಷ್ಟದಲ್ಲಿ ಸಂಚಾರ
Last Updated 24 ಫೆಬ್ರುವರಿ 2021, 3:54 IST
ಅಕ್ಷರ ಗಾತ್ರ

ಚೇಳೂರು: ಸರ್ಕಾರ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದರೂ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವವರ ಒದ್ದಾಟ ಮುಂದುವರಿದಿದೆ. ಅದರಲ್ಲೂ ಗಡಿ ಪ್ರದೇಶದಲ್ಲಿ ಇಂದಿಗೂ ಪ್ರಯಾಣಿಕರ ಸಾರಿಗೆ ಬವಣೆ ತೀರಿಲ್ಲ. ಸಾರಿಗೆ ಬಸ್ಸುಗಳನ್ನು ಗ್ರಾಮೀಣಕ್ಕೆ ಬಿಡದೇ ಸತಾಯಿಸುತ್ತಿದ್ದಾರೆ.

ಪ್ರತಿಭಟನೆ, ಹೋರಾಟಗಳು ಮಾಡಲು ಪ್ರಯಾಣಿಕರು ಕೆಲಸದ ಒತ್ತಡಗಳಲ್ಲಿ ಇದ್ದು ಸಮಯಕ್ಕೆ ಬೆಲೆ ಕೊಡುತ್ತಾರೆಯೇ ಹೊರತು ಇಂತಹ ಜನಪರ ಕೆಲಸಗಳು ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

‘ಖಾಸಗಿ ಬಸ್ಸುಗಳವರು ಸಮಯಪಾಲನೆ ಮಾಡುತ್ತಾರೆ. ಆದರೆ ಪ್ರಯಾಣಿಕರನ್ನು ಕುರಿಗಳಂತೆ ಬಸ್ಸಿನಲ್ಲಿ ತುಂಬಿಸಿಕೊಳ್ಳುತ್ತಾರೆ. ಲಾಭಕ್ಕಾಗಿ ಪ್ರಯಾಣಿಕರಿಗೆ ಎಂತಹ ಕಿರುಕುಳ ಕೊಡುವುದಕ್ಕೂ ಇವರು ಸಿದ್ಧ ’ ಎಂದು ಚೇಳೂರು ನಿವಾಸಿಗಳು ದೂರುತ್ತಾರೆ.

ಚೇಳೂರು ಆಂಧ್ರ ಗಡಿಭಾಗವಾಗಿದ್ದು ಬಾಗೇಪಲ್ಲಿಯಿಂದ ಚೇಳೂರಿಗೆ, ಚೇಳೂರುನಿಂದ ಬಾಗೇಪಲ್ಲಿಗೆ ಚಿಲಕಲನೇರ್ಪು, ಚಿಂತಾಮಣಿ, ಪಾಳ್ಯಕೆರೆ ಪೋನಾಯಕನಹಳ್ಳಿ ಮುಂತಾದ ಗ್ರಾಮಗಳಿಗೆ ತೆರಳಲು ಬಸ್ಸುಗಳಿಲ್ಲದೇ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ.

‘ಹಳ್ಳಿಗಳ ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಬಸ್‌ಗಳಿಲ್ಲದೆ, ಖಾಸಗಿ ಬಸ್‌, ಆಟೊ–ಟೆಂಪೊ ಮತ್ತಿತರ ವಾಹನಗಳಲ್ಲಿ ಸಂಚರಿಸಬೇಕಾಗಿದೆ. ಈ ವಾಹನಗಳಲ್ಲಿ ಜನರನ್ನು ಒಳಗೆ ಮಾತ್ರವಲ್ಲ, ಮೇಲೆಯೂ ಕುರಿಗಳಂತೆ ತುಂಬಲಾಗುತ್ತದೆ. ಅಂಗೈನಲ್ಲಿ ತಮ್ಮ ಪ್ರಾಣಗಳನ್ನು ಇಟ್ಟಿಕೊಂಡು ಪ್ರಯಾಣಿಸಬೇಕಾಗಿದೆ. ಸಮಯ ಪಾಲನೆಗಾಗಿ ಚಾಲಕರು ಅತಿವೇಗವಾಗಿ ಚಾಲನೆ ಮಾಡುತ್ತಾರೆ. ಇಂತಹ ಬೇಜವಾಬ್ದಾರಿ ಚಾಲಕರ ಮೇಲೂ ಅಧಿಕಾರಿಗಳು ಕ್ರಮ ಜರುಗಿಸುವುದಿಲ್ಲ’ ಎಂದು ಜನರು ದೂರುತ್ತಾರೆ.

‘ಚೇಳೂರು ಗ್ರಾಮಾಂತರ ಜನತೆ ಸರ್ಕಾರಿ ಕೆಂಪು ಬಸ್‍ಗಳನ್ನು ಕಾಣದೆ ಇದ್ದಾರೆ ಎಂದರೆ ತಪ್ಪಾಗಲಾರದು. ಚೇಳೂರು ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿ ತಾಲ್ಲೂಕು ಕೇಂದ್ರವಾಗಿದೆ. ಚೇಳೂರಿಂದ ಬಾಗೇಪಲ್ಲಿಗೆ, ಮತ್ತು ಚೇಳೂರಿನಿಂದ ಚಿಂತಾಮಣಿಯ ಮಾರ್ಗಗಳಲ್ಲಿ ಸಂಚರಿಸಲು ಸರ್ಕಾರಿ ಕೆಂಪು ಬಸ್‍ಗಳು ಮಾಯವಾಗಿವೆ’ ಎಂದು ಸ್ಥಳೀಯ ಮುಖಂಡ ರಾಜೇಶ್‌ ದೂರಿದರು.

‘ಚೇಳೂರಿಗೆ ಕೇವಲ ಎರಡು ಸರ್ಕಾರಿ ಬಸ್‍ಗಳು ರಾತ್ರಿವೇಳೆ ನಿಲುಗಡೆಗೆ ಬರುತ್ತವೆ. ಸೂರ್ಯೋದಯಕ್ಕೆ ಮುನ್ನವೇ ಮಾಯವಾಗುತ್ತವೆ. ಚೇಳೂರು, ಪಾತಪಾಳ್ಯ, ಪಾಳ್ಯಕೆರೆ, ಬಿಳ್ಳೂರುಗಳ ಕಡೆಗೆ ಬಸ್‌ಗಳಿಲ್ಲ. ಇಂದಿಗೂ ಸಹ ಕಾಲುದಾರಿಯಲ್ಲಿ ಸಂಚರಿಸುತ್ತಾರೆ. ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇದು ಸಾಕ್ಷಿ’ ಎಂದು ಗ್ರಾಮದ ಹಿರಿಯರಾದ ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮಾಂತರ ಪ್ರದೇಶಗಳ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ, ಆಸ್ಪತ್ರೆಗಳಿಗೆ ಇನ್ನಿತರ ಕಾರ್ಯಗಳಿಗೆ ಪ್ರಯಾಣ ಬೆಳೆಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ಕಾರಿ ಬಸ್‌ಗಳನ್ನು ಓಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT