ಮಹಾಪುರುಷರ ಜಯಂತಿಗಳು ಸರ್ವಮಾನ್ಯವಾಗಲಿ

7
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಜಚನಿ ಕಾಲೇಜಿನಲ್ಲಿ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’

ಮಹಾಪುರುಷರ ಜಯಂತಿಗಳು ಸರ್ವಮಾನ್ಯವಾಗಲಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಮಹಾಪುರುಷರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಿ ಆಚರಿಸುವುದು ಸಲ್ಲದು. ಇದರಿಂದ ಅನ್ಯಜನಾಂಗ ಆ ಬಗ್ಗೆ ಅಸಹನೆ ಮತ್ತು ಸಂಶಯದಿಂದ ವರ್ತಿಸುತ್ತವೆ. ಆದ್ದರಿಂದ ಜಯಂತಿಗಳು ಸರ್ವಮಾನ್ಯವಾಗಿ ಆಚರಣೆಯಾದಾಗ ಮಾತ್ರ ನಮ್ಮ ಹಿಂದಿನ ಪೀಳಿಗೆಯ ಮಹಾಪುರುಷರಿಗೆ ನ್ಯಾಯಸಮ್ಮತವಾದ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಹೇಳಿದರು.

ನಗರದ ಜಚನಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಸುಮಾರು 500ವರ್ಷಗಳ ಹಿಂದೆ ಜನಾನುರಾಗಿ ಸಾಮಂತರಾಗಿದ್ದ ಕೆಂಪೇಗೌಡರು ತಮ್ಮ ದೂರದೃಷ್ಟಿ, ಕನಸುಗಾರಿಕೆ ಮತ್ತು ಜಾತ್ಯಾತೀತ ಮನೋಭಾವದ ಮೂಲಕ ಕಟ್ಟಿದ ಬೆಂಗಳೂರು ಈಗ ಸರ್ವಜನಾಂಗದ ಶಾಂತಿಯ ತೋಟವಾಗಿ ಅಭಿವೃದ್ಧಿ ಹೊಂದಲು ಕಾರಣವಾಯಿತು’ ಎಂದು ತಿಳಿಸಿದರು.

‘ಜಾತ್ಯಾತೀತವಾಗಿ ವಿವಿಧ ಜನಾಂಗದ ಕಸುಬುದಾರು, ಕುಶಲ ಕರ್ಮಿಗಳು, ವಣಿಕರು ಮುಂತಾಗಿ ಅವರವರದೇ ಪೇಟೆಗಳಲ್ಲಿ ನೆಲೆಗೊಳಿಸುವ ಮೂಲಕ ಅಂದಿನಕಾಲದಲ್ಲಿಯೇ ಸ್ಮಾರ್ಟ್ ಸಿಟಿಯ ಕಲ್ಪನೆಯನ್ನು ಸಾಕಾರಗೊಳಿಸಿದ ಚತುರತೆ ಸರ್ವ ಕಾಲಕ್ಕೂ ಅನುಕರಣೀಯ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ಇಂದಿನ ಯುವಪೀಳಿಗೆ ತಮ್ಮ ವ್ಯಕ್ತಿತ್ವವನ್ನು ರಚನಾತ್ಮಕವಾಗಿ ರೂಪಿಸಿಕೊಳ್ಳುವ ಬದಲು ಈಗ ಸುಲಭವಾಗಿ ಕೈಗೆಟುಕುವ ಆಧುನಿಕ ಸೌಲಭ್ಯಗಳ ದಾಸರಾಗಿದ್ದಾರೆ. ಹೀಗಾಗಿ ಅವರ ವ್ಯಕ್ತಿತ್ವ ವಿಕಸನಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಶಿಕ್ಷಕರು ಆಗಿಂದಾಗ್ಗೆ ನಿಗಾ ವಹಿಸಿ ಓದಿನಲ್ಲಿ ವಿದ್ಯಾರ್ಥಿಗಳ ಕ್ಷಮತೆ ಕುಸಿಯದಂತೆ ಕ್ರಮವಹಿಸುವುದು ಬಹಳವೇ ಮುಖ್ಯ’ ಎಂದು ಹೇಳಿದರು.

ಪ್ರಾಂಶುಪಾಲ ವೆಂಕಟರಮಣಪ್ಪ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಪ್ರತಿನಿಧಿ ಉಷಾ, ಕಾನೂನು ಕಾಲೇಜಿನ ಪ್ರಾಂಶುಪಾಲ ಸುರೇಶ್, ಕಸಾಪ ಕಾರ್ಯದರ್ಶಿಗಳಾದ ಪ್ರವೀಣ್ ಮತ್ತು ಶಂಷುದ್ದೀನ್, ಅಶ್ವತ್ಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !