ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಪ್ರಜಾವಾಣಿ ವರದಿ ಫಲಶ್ರುತಿ, ಬರಲಿಲ್ಲ ಮಾಸಾಶನ, ನೆರವಾದ ಟ್ರಸ್ಟ್

ಅಂಗವಿಕಲೆ ಪರ್ವಿನ್ ತಾಜ್ ಕುಟುಂಬಕ್ಕೆ ಮಂಗಳೂರಿನ 'ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್' ನೆರವು
Last Updated 20 ಮೇ 2020, 12:38 IST
ಅಕ್ಷರ ಗಾತ್ರ
ADVERTISEMENT
""

ಚಿಕ್ಕಬಳ್ಳಾಪುರ: ಕಳೆದ ಐದು ತಿಂಗಳಿಂದ ಮಾಸಾಶನ ಸಿಗದೆ ಕಂಗಾಲಾಗಿದ್ದ ನಗರದ ಕೆಳಗಿನತೋಟದ ತಿಪ್ಪರೆಡ್ಡಿ ಬಡಾವಣೆಯ ಹಿಂಬದಿ ರಸ್ತೆ ನಿವಾಸಿ, ಅಂಗವಿಕಲೆ ಪರ್ವಿನ್ ತಾಜ್‌ ಅವರ ಕುಟುಂಬಕ್ಕೆ ಮಂಗಳೂರಿನ ಟ್ರಸ್ಟ್‌ವೊಂದು ಒಂದು ವರ್ಷದವರೆಗೆ ದಿನಸಿ ವಿತರಿಸಲು ಮುಂದೆ ಬಂದು ಮಾನವೀಯತೆ ಮೆರೆದಿದೆ.

ತೀವ್ರ ತೆರನಾದ ಅಂಗವೈಕಲ್ಯ ಹೊಂದಿರುವ ಪರ್ವಿನ್‌ ತಾಜ್ ಅವರಿಗೆ ಮಾಸಾಶನ ಸಿಗದೆ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದ ಬಗ್ಗೆ ’ಪ್ರಜಾವಾಣಿ‘ ಸೋಮವಾರ ’ಸಿಗದ ಮಾಸಾಶನ, ತಾಳಲಾರದ ಬಡತನ‘ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಗಮನಿಸಿ ಮಂಗಳೂರಿನ ’ಎಂ ಫ್ರೆಂಡ್ಸ್ ಚಾರಿಟೆಬಲ್‌ ಟ್ರಸ್ಟ್‌‘ನ ಸಂಸ್ಥಾಪಕ ರಶೀದ್‌ ವಿಟ್ಲ ಅವರು ಮಂಗಳವಾರ ಪರ್ವಿನ್‌ ತಾಜ್ ಅವರ ಕುಟುಂಬ ಸಂಪರ್ಕಿಸಿ ಒಂದು ವರ್ಷದ ವರೆಗೆ ಸ್ಥಳೀಯ ಮಳಿಗೆಯೊಂದರಿಂದ ದಿನಸಿ ಸಾಮಗ್ರಿಗೆ ಒದಗಿಸುವ ಭರವಸೆ ನೀಡಿದರು.

’ಪ್ರಜಾವಾಣಿ‘ಯೊಂದಿಗೆ ಮಾತನಾಡಿ ರಶೀದ್‌, ’ನಾವು ಶೀಘ್ರದಲ್ಲಿಯೇ ನಮ್ಮ ಟ್ರಸ್ಟ್‌ ಪದಾಧಿಕಾರಿಯೊಬ್ಬರನ್ನು ಚಿಕ್ಕಬಳ್ಳಾಪುರಕ್ಕೆ ಕಳುಹಿಸಿ ಪರ್ವಿನ್ ತಾಜ್ ಅವರ ಕುಟುಂಬಕ್ಕೆ ದಿನಸಿ ಕೊಡಿಸುವ ಜತೆಗೆ ಸ್ವಲ್ಪ ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ಜತೆಗೆ ಒಂದು ವರ್ಷ ದಿನಸಿ ವ್ಯವಸ್ಥೆ ಮಾಡುತ್ತೇವೆ‘ ಎಂದು ತಿಳಿಸಿದರು.

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜ್ಯೋತಿ ಅವರುಪರ್ವಿನ್‌ ತಾಜ್ ಅವರ ಮನೆಗೆ ಭೇಟಿ ನೀಡಿ ಕುಳಿತುಕೊಳ್ಳಲು ಅನುಕೂಲವಾಗುವಂತಹ ಕುರ್ಚಿ ಒದಗಿಸುವುದಾಗಿ ತಿಳಿಸಿದ್ದಾರೆ.

ಜತೆಗೆ, ನಗರದ 9ನೇ ವಾರ್ಡ್‌ ನಿವಾಸಿ, ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಅಶೋಕ್‌ ಅವರು ಪರ್ವಿನ್‌ ತಾಜ್ ಅವರ ಮನೆಗೆ ಭೇಟಿ ನೀಡಿ ವಿವಿಧ ಆಹಾರ ಪದಾರ್ಥಗಳು, ಸಲ್ಪ ಹಣಕಾಸಿನ ಸಹಾಯ ಮಾಡುವ ಮೂಲಕ ನೋವಿನಲ್ಲಿದ್ದವರಿಗೆ ಮಿಡಿದಿದ್ದಾರೆ.

ಇದನ್ನೂ ಓದಿ...ಚಿಕ್ಕಬಳ್ಳಾಪುರ | ಸಿಗದ ಮಾಸಾಶನ, ತಾಳಲಾರದ ಬಡತನ

ಆದೇಶ ಪತ್ರ ನೀಡಿ ಕೈತೊಳೆದುಕೊಂಡರು!
ಕಳೆದ ಐದು ತಿಂಗಳಿಂದ ಮಾಸಾಶನ ಸಿಗದೆ ಕಂಗಾಲಾಗಿದ್ದ ನಗರದ ಕೆಳಗಿನತೋಟದ ತಿಪ್ಪರೆಡ್ಡಿ ಬಡಾವಣೆಯ ಹಿಂಬದಿ ರಸ್ತೆ ನಿವಾಸಿ,ಅಂಗವಿಕಲೆ ಪರ್ವಿನ್ ತಾಜ್‌ ಅವರ ಕುಟುಂಬಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬಾಕಿ ಇರುವ ಮಾಸಾಶನ ಕೊಡಿಸಲು ನೆರವಾಗುವ ಬದಲು ಮಾಸಾಶನಕ್ಕೆ ಹೊಸ ಆದೇಶ ನೀಡಿ ಕೈತೊಳೆದುಕೊಂಡಿದ್ದಾರೆ.

’ಪ್ರಜಾವಾಣಿ‘ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ತಹಶೀಲ್ದಾರ್ ನಾಗಪ್ರಶಾಂತ್‌ ಅವರು ಸೋಮವಾರ ಬೆಳಿಗ್ಗೆ ಪರ್ವಿನ್ ತಾಜ್‌ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪರ್ವಿನ್‌ ತಾಜ್ ಅವರ ತಂದೆ ಬಾಬುಸಾಬ್‌ ಅವರನ್ನು ಜತೆಗೆ ತಾಲ್ಲೂಕು ಕಚೇರಿಗೆ ಕರೆದುಕೊಂಡು ಹೋಗಿದ್ದರು.

ಕಚೇರಿಯಲ್ಲಿ ಪರಿಶೀಲನೆ ವೇಳೆ ಮಾಸಾಶನ ಪಾವತಿ ವ್ಯವಸ್ಥೆ ಆರ್ಥಿಕ ಇಲಾಖೆ ಹೊಸದಾಗಿ ಜಾರಿಗೊಳಿಸಿದ ಖಜಾನೆ-2ಗೆ (ಕೆ-2) ಬದಲಾದ ವೇಳೆ ಆಧಾರ್‌ ಸಂಖ್ಯೆ ಜೋಡಣೆಯಾಗದ ಕಾರಣಕ್ಕೆ ಮಾಸಾಶನ ಪಾವತಿಯಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿದ್ದರು ಎಂದು ತಿಳಿದು ಬಂದಿದೆ.

ದೈಹಿಕ ಸ್ವಾಧೀನ ಕಳೆದಕೊಂಡು ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿರುವ ಪರ್ವಿನ್ ತಾಜ್ ಅವರನ್ನು ಕೂಲಿನಾಲಿ ಬಿಟ್ಟು ಬಡ ಪೋಷಕರು ಶ್ರುಶೂಷೆ ಮಾಡಬೇಕಾದ ಸ್ಥಿತಿ ಇದೆ. ಅಂತಹ ಸ್ಥಿತಿಯನ್ನು ಕಣ್ಣಾರೆ ಕಂಡರೂ ಮಾನವೀಯತೆ ದೃಷ್ಟಿಯಿಂದ ಮಾಸಾಶನ ಬಾಕಿ ಬಿಡುಗಡೆಗೆ ಕ್ರಮಕೈಗೊಳ್ಳುವ ಬದಲು ಜೂನ್ 1 ರಿಂದ ಜಾರಿಗೆ ಬರುವಂತೆ ಮಾಸಾಶನ ಮಂಜೂರಾತಿಯ ಹೊಸ ಆದೇಶ ಕೈಗಿತ್ತು ಕಳುಹಿಸಿದ್ದಾರೆ.

’ಆರು ತಿಂಗಳಿಂದ ಮಾಸಾಶನಕ್ಕೆ ಚಾತಕ ಪಕ್ಷಿಯಂತೆ ಕಾಯ್ದ ಕುಟುಂಬ ಮನೆ ಬಾಗಿಲಿಗೆ ಅಧಿಕಾರಿಗಳೇ ಬಂದಾಗ ತಮ್ಮ ಕಷ್ಟ ಪರಿಹಾರವಾಯಿತು ಎಂದು ಸಂತಸಪಟ್ಟಿತ್ತು. ಆದರೆ, ಅಧಿಕಾರಿಗಳು ಹೊಸ ಆದೇಶ ಪತ್ರ ಮಾತ್ರ ಕೊಟ್ಟು ವಾಪಾಸ್ ಕಳುಹಿಸಿದ್ಧಾರೆ. ಬಾಕಿ ಮಾಸಾಶನದ ಬಗ್ಗೆ ಚಕಾರ ಎತ್ತದಿರುವುದು ಬೇಸರ ತಂದಿದೆ‘ ಎಂದು ಸ್ಥಳೀಯ ನಿವಾಸಿ ಸುಭಾನ್ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ನಾಗಪ್ರಶಾಂತ್‌ ಅವರು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

'ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿ.

*
ಪರ್ವಿನ್ ತಾಜ್ ಅವರಿಗೆ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ.
–ಜ್ಯೋತಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ

***

ನೆರವು ನೀಡಿ: ಆರ್ಥಿಕವಾಗಿ ಸ್ಥಿತಿವಂತರಿರುವ ದಾನಿಗಳು ಪರ್ವಿನ್ ತಾಜ್ ಅವರ ಕುಟುಂಬಕ್ಕೆ ಸಹಾಯ ಮಾಡಬಹುದು.

ಬಾಬುಸಾಬ್, ಆಂಧ್ರಾ ಬ್ಯಾಂಕ್ ಚಿಕ್ಕಬಳ್ಳಾಪುರ ಶಾಖೆ, ಖಾತೆ ನಂಬರ್: 170810100055131. ಐಎಫ್‌ಎಸ್‌ಸಿ ಕೋಡ್‌: ANDB0001708.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT