ಶನಿವಾರ, ಡಿಸೆಂಬರ್ 7, 2019
24 °C
ಕೆಳಗಿನ ತೋಟಗಳ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

ಕೋಚಿಮುಲ್‌ ಬೇರ್ಪಡಿಸಲು ಪ್ರಯತ್ನ ಮಾಡಿ: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಂದಿಕ್ರಾಸ್‌ ಬಳಿ ನಿರ್ಮಿಸಿರುವ ಮೆಗಾ ಡೇರಿಯಲ್ಲಿ ಹಾಲಿನ ವಿವಿಧ ಉತ್ಪನ್ನಗಳನ್ನು ತಯಾರಿಸಿದರೆ ಜಿಲ್ಲೆಯ ರೈತರ ಹಾಲಿಗೆ ಇನ್ನೂ ಹೆಚ್ಚಿನ ಬೆಲೆ ನೀಡಲು ಸಾಧ್ಯವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (ಕೋಚಿಮುಲ್‌) ಕೋಲಾರದಿಂದ ಬೇರ್ಪಡಿಸುವ ಪ್ರಯತ್ನ ಮಾಡಬೇಕಿದೆ’ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

ನಗರದ ಕೆಳಗಿನ ತೋಟಗಳ (ಎಚ್.ಎಸ್.ಗಾರ್ಡನ್) ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಗೆ ಮೆಗಾ ಡೇರಿ ತರಲು ಹಿಂದೆ ಬಹಳಷ್ಟು ಶ್ರಮ ಪಟ್ಟಿರುವೆ. ಶಾಸಕನಾಗಿದ್ದ ವೇಳೆ ಡೇರಿಗೆ ತೋಟಗಾರಿಕೆ ಇಲಾಖೆಗೆ ಸೇರಿದ 5 ಎಕರೆ ಜಾಗ ನೀಡಿ ಎಂದು ಅಂದಿನ ತೋಟಗಾರಿಕೆ ಸಚಿವ ಉಮೇಶ್ ಕತ್ತಿ ಅವರು ಕೇಳಿದಾಗ ಅವರು ಬಹಳ ಲಘುವಾಗಿ ಮಾತನಾಡಿದರು. ಬಳಿಕ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಒಮ್ಮತ ಪಡೆದು ಅದೇ ತೋಟಗಾರಿಕೆ ಇಲಾಖೆಗೆ ಸೇರಿದ 15 ಎಕರೆ ಜಾಗವನ್ನು ಮಂಜೂರು ಮಾಡಿಸಿದೆ’ ಎಂದು ತಿಳಿಸಿದರು.

‘ಇವತ್ತು ಜಿಲ್ಲೆಯಲ್ಲಿ ಮಳೆಯ ಜೂಜಾಟ, ಸತತ ಬರಗಾಲದ ಕಾರಣಕ್ಕೆ ಅಂತರ್ಜಲ ಕುಸಿತಗೊಂಡು ಕೊಳವೆಬಾವಿಗಳು ಬತ್ತುತ್ತಿವೆ. ಪರಿಣಾಮ, ನೀರಿನ ಕೊರತೆಯಿಂದ ರೈತರು ರೇಷ್ಮೆ ಕೃಷಿ ಮಾಡಲು, ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ರೇಷ್ಮೆಗೂಡಿನ ಬೆಲೆ ದಿಢೀರ್ ಕುಸಿದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೆಲ್ಲದರ ನಡುವೆಯೂ ಸಾಕಷ್ಟು ಜನರು ಹೈನುಗಾರಿಕೆಯಲ್ಲಿ ನೆಮ್ಮದಿ ಜೀವನ ಕಂಡುಕೊಳ್ಳುತ್ತಿದ್ದಾರೆ’ ಎಂದರು.

ಕೋಚಿಮುಲ್‌ ನಿರ್ದೇಶಕ ಎನ್.ಸಿ.ವೆಂಕಟೇಶ್ ಮಾತನಾಡಿ, ‘ಮೆಗಾ ಡೇರಿ ನಿರ್ಮಾಣಕ್ಕಾಗಿ ಕೋಚಿಮುಲ್ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಿಂದ (ಎನ್‌ಡಿಡಿಬಿ) ₨59 ಕೋಟಿ ಸಾಲ ಪಡೆದಿದೆ. ಅದನ್ನು ತೀರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ತಿಂಗಳು ₹80 ಲಕ್ಷ ಮರುಪಾವತಿ ಮಾಡಲಾಗುತ್ತಿದೆ. ಮರುಪಾವತಿ ಪ್ರಮಾಣವನ್ನು ತಿಂಗಳಿಗೆ ₹1 ಕೋಟಿಗೆ ಹೆಚ್ಚಿಸಿದರೆ ಮುಂದಿನ ಚುನಾವಣೆ ಹೊತ್ತಿಗೆ ಎನ್‌ಡಿಡಿಬಿ ಸಾಲ ತೀರಿಸಬಹುದು’ ಎಂದು ಹೇಳಿದರು.

‘ಮುಂದಿನ ಸಾಮಾನ್ಯ ಸಭೆಯಲ್ಲಿ ಎಲ್ಲಾ ತಾಲ್ಲೂಕು ನಿರ್ದೇಶಕರು ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಪಣ ತೊಡಬೇಕು ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಮನವಿ ಮಾಡಿದರು. ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ, ಸಂಘದ ಆಡಳಿತ ವರದಿ, 2018–19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಓದಿ ಅಂಗೀಕರಿಸಲಾಯಿತು. 2019–20ನೇ ಸಾಲಿನ ಆಯವ್ಯಯಕ್ಕೆ ಮಂಜೂರಾತಿ ಪಡೆದುಕೊಳ್ಳಲಾಯಿತು.

ಕೆ.ವಿ ಮತ್ತು ಪಂಚಗಿರಿ ವಿದ್ಯಾ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕುಮಾರ್, ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪಾಪೇಗೌಡ, ವಿಸ್ತರಣಾಧಿಕಾರಿ ಸದಾಶಿವ, ಕಾರ್ಯದರ್ಶಿ ಪುಷ್ಪಲತಾ, ಸಂಘದ ಅಧ್ಯಕ್ಷ ತಿಪ್ಪಣ್ಣ, ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪಿಳ್ಳಪ್ಪ, ಎನ್. ಬೀರಪ್ಪ, ಎಸ್.ವಿ.ಪ್ರತಾಪ್ ಕುಮಾರ್, ಎಚ್.ಡಿ.ಸುಬ್ರಮಣಿ, ಗುರುಮೂರ್ತಿ, ಮಂಜುನಾಥ್, ರತ್ಮಮ್ಮ, ಪದ್ಮಮ್ಮ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು