ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಕಾಂಗ್ರೆಸ್‌ನಲ್ಲಿ ಮುಂದುವರಿದಿದೆ ಮುನಿಸಿನ ಪರಂಪರೆ

ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ ಎರಡ್ಮೂರು ದಶಕಗಳಿಂದಲೂ ಮರುಕಳಿಸುತ್ತ ಬರುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಂಡಾಯದ ಬೇಗುದಿ
Last Updated 15 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನಲ್ಲಿ ಎರಡು ಮೂರು ದಶಕಗಳ ಹಿಂದಿನಿಂದಲೂ ಶಾಸಕರ ಆಪ್ತ ವಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುನಿಸಿಕೊಳ್ಳುತ್ತ ಬರುವ ‘ಚಾಳಿ’ ಈವರೆಗೂ ನಿಂತಿಲ್ಲ. ಅದೀಗ ಮತ್ತೆ ಮರುಕಳಿಸಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

1989-94 ರ ಅವಧಿಯಲ್ಲಿ ಶಾಸಕರಾಗಿದ್ದ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಅವರ ಆಡಳಿತದಲ್ಲಿ ಬ್ಲಾಕ್ ಕಾಂಗ್ರೆಸ್ ‌ಅಧ್ಯಕ್ಷರಾಗಿದ್ದ ಅವರ ಶಿಷ್ಯರಾಗಿದ್ದ ಎನ್.ಎಚ್‌.ಶಿವಶಂಕರರೆಡ್ಡಿ (1991-99) ಅವರು ಮೊದಲ ಬಾರಿಗೆ ಮುನಿಸಿನ ರಾಜಕೀಯಕ್ಕೆ ನಾಂದಿ ಹಾಡಿದ್ದರು.

1999 ರಲ್ಲಿ‌ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಶಿವಶಂಕರರೆಡ್ಡಿ ಅವರು ಮೊದಲ ಪ್ರಯತ್ನದಲ್ಲಿಯೇ ಜಯ ಗಳಿಸಿ ತಮ್ಮ ಗುರುವಿಗೆ ಮುಖಭಂಗ ಮಾಡಿದ್ದರು. ಬಳಿಕ ಶಿವಶಂಕರರೆಡ್ಡಿ ಅವರು ತಮ್ಮ ಆಪ್ತ ವಲಯದಲ್ಲಿದ್ದ ಆರ್.ಅಶೋಕ್ ಕುಮಾರ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರನ್ನಾಗಿ, ಬೊಮ್ಮಣ್ಣ ಅವರನ್ನು ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾದ ಶಿವಶಂಕರರೆಡ್ಡಿ ಅವರ ಜತೆ ಮುನಿಸಿಕೊಂಡ ಅಶೋಕ್‌ ಕುಮಾರ್ ಅವರು ಜಾತಿ ಬಲ ನಂಬಿ ಬಂಡಾಯ ಸಾರಿ, ಶಿವಶಂಕರರೆಡ್ಡಿ ಅವರ ಹಾದಿಯನ್ನೇ ತುಳಿದರಾದರೂ ಯಶಸ್ಸು ಸಿಗದೆ ಮೂಲೆಗುಂಪಾದರು.

ಆ ಸಂದರ್ಭದಲ್ಲಿ ಶಾಸಕರು ಕಾಂಗ್ರೆಸ್‌ ಹಿರಿಯ ಮುಖಂಡ ಜಿ.ವಿ.ಕೃಷ್ಣಮೂರ್ತಿ ಅವರ ಹಿರಿಯ ಪುತ್ರ ಜಿ.ಕೆ.ಸತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಹಾಗೂ ಒಕ್ಕಲಿಗ ಸಮುದಾಯದ ಬಿ.ಜಿ.ವೇಣುಗೋಪಾಲರೆಡ್ಡಿ ಅವರನ್ನು ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

ಶಿವಶಂಕರರೆಡ್ಡಿ ಅವರು 2008ರ ಚುನಾವಣೆಯಲ್ಲಿ ಎರಡನೇ ಬಾರಿ ಕಾಂಗ್ರೆಸ್ ‌ಅಭ್ಯರ್ಥಿಯಾದ ವೇಳೆ ಜಿ.ಕೆ.ಸತೀಶ್ ಕುಮಾರ್ ಹಾಗೂ ಗ್ರಾಮೀಣ ‌ಘಟಕದ ಅಧ್ಯಕ್ಷ ಅಬ್ದುಲ್ಲಾ ಅವರ ಸಹಕಾರದಿಂದ ಶಾಸಕರು ಹ್ಯಾಟ್ರಿಕ್ ಗೆಲುವು ಸಾಧಿಸಿದರು.

2013ರಲ್ಲಿ ಶಿವಶಂಕರರೆಡ್ಡಿ ಅವರು ಪುನಃ ಕೈ ಹುರಿಯಾಳು ಆದ ಸಂದರ್ಭದಲ್ಲಿ ಸತೀಶ್‌ ಕುಮಾರ್ ಅವರು ನಗರ ಮತ್ತು ಗ್ರಾಮೀಣ ಹೀಗೆ ಎರಡೂ ಘಟಕಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷದ ಸಂಘಟನೆ ಹಾಗೂ‌ ಕಾರ್ಯಕರ್ತರ ಒಗ್ಗಟ್ಟಿನಿಂದಾಗಿ ಶಿವಶಂಕರರೆಡ್ಡಿ ಅವರು ನಾಲ್ಕನೇ ಬಾರಿ ಕೂಡ ಗೆಲುವಿನ ನಗೆ ಬೀರಿದ್ದರು.

2018ರ ಚುನಾವಣೆ ವೇಳೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸತೀಶ್ ಕುಮಾರ್ ಅವರು ಶಿವಶಂಕರರೆಡ್ಡಿ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡರು. ಇದೇ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ ಅವರನ್ನು ನಗರ ಘಟಕದ ಅಧ್ಯಕ್ಷರಾಗಿ ಹಾಗೂ ‌ಅಬ್ದುಲ್ಲಾ ಅವರನ್ನು ಗ್ರಾಮೀಣ ಘಟಕದ ‌ಅಧ್ಯಕ್ಷರನ್ನಾಗಿ‌ ನೇಮಕ ಮಾಡಿದಾಗ ಸತೀಶ್‌ ಅವರು ಶಾಸಕರ‌ ವಿರೋಧಿ ಬಣದಲ್ಲಿ‌ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ನರಸಿಂಹಮೂರ್ತಿ ಮತ್ತು ಅಬ್ದುಲ್ಲಾ ಅವರು ಇತ್ತೀಚೆಗೆ ಏಕಕಾಲಕ್ಕೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಕ್ಷದಲ್ಲಿ ಸದ್ಯ ಮತ್ತೆ ಮಿಂಚಿನ ಸಂಚಲನ ಉಂಟಾಗಿದೆ.

ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಇತ್ತೀಚೆಗೆ ಖಾಲಿಯಾಗಿರುವ ಎರಡೂ ಸ್ಥಾನಗಳಲ್ಲಿ ಶಾಸಕರು ಯಾರನ್ನು ಪ್ರತಿಷ್ಠಾಪಿಸಿ ತಮ್ಮ ಪ್ರತಿಷ್ಠೆ ಕಾಯ್ದುಕೊಳ್ಳುವ ತಂತ್ರಗಾರಿಕೆ ಮಾಡುತ್ತಾರೆ ಎನ್ನುವುದು ಸದ್ಯ ಹಸ್ತ ಪಾಳೆಯದಲ್ಲಿ ಚರ್ಚೆಗೆ ಎಡೆ ಮಾಡಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT