ಸೋಮವಾರ, ಅಕ್ಟೋಬರ್ 21, 2019
24 °C

ಕರ್ತವ್ಯ ಲೋಪ: ಇಬ್ಬರು ಶಿಕ್ಷಕರ ಅಮಾನತು

Published:
Updated:

ಚಿಕ್ಕಬಳ್ಳಾಪುರ: ನಕಲಿ ಸಹಿ ಮಾಡಿ ಹಣ ದುರುಪಯೋಗಪಡಿಸಿಕೊಂಡ ಮತ್ತು ಕರ್ತವ್ಯ ಲೋಪ ಎಸಗಿದ ಶಿಡ್ಲಘಟ್ಟ ತಾಲ್ಲೂಕಿನ ಇಬ್ಬರು ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚೆಕ್ ಮೇಲೆ ನಕಲಿ ಸಹಿ ಮಾಡಿ ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆಯಿಂದ ₨66 ಸಾವಿರ ಹಣ ತೆಗೆದುಕೊಳ್ಳುವ ಜತೆಗೆ ಶಾಲೆಗೆ ಪದೇ ಪದೇ ಗೈರುಹಾಜರಾಗುತ್ತಿದ್ದ ಶಿಡ್ಲಘಟ್ಟ ತಾಲ್ಲೂಕಿನ ಮಾರಗಾನಪರ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎಂ.ಪಿ.ರಮೇಶ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಆಧಾರದಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ರಾಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಪ್ಪ ಅವರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ, ಮದ್ಯಪಾನ ಮಾಡುವುದು, ಶಾಲೆಯಲ್ಲಿ ಅಸಭ್ಯವಾಗಿ ವರ್ತನೆ ಮಾಡುವುದು, ಎಲೆ ಅಡಿಕೆ ತರಲು ವಿದ್ಯಾರ್ಥಿಗಳನ್ನು ಅಂಗಡಿಗೆ ಕಳುಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶಿಡ್ಲಘಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ನರಸಿಂಹಪ್ಪ ಅವರನ್ನು ಡಿಡಿಪಿಐ ಅಮಾನತುಗೊಳಿಸಿದ್ದಾರೆ.

Post Comments (+)