ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯ ಪ್ರಕರಣಗಳಿಗೆ ನಿರುದ್ಯೋಗವೇ ಕಾರಣ

ಡಿವೈಎಫ್‌ಐ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶ
Last Updated 4 ಅಕ್ಟೋಬರ್ 2020, 15:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿರುವ ಕಾರಣಕ್ಕೆ ಅಪರಾಧ ಪ್ರಕರಣಗಳು ಏರುಮುಖವಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇವತ್ತು ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ’ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಿಲ್ಲಾ ಸಂಘಟನಾ ಸಮಿತಿ ಸಹ ಸಂಚಾಲಕ ಡಾ.ಅನಿಲ್‌ಕುಮಾರ್ ಆವುಲಪ್ಪ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಡಿವೈಎಫ್‌ಐ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮನುಷ್ಯ ವಿಕಾಸದ ಹಾದಿಯಲ್ಲಿ ದುಡಿಮೆ ಪ್ರಮುಖ ಪ್ರಕ್ರಿಯೆ. ಮನುಷ್ಯನಾದವನು ದುಡಿಮೆಯಲ್ಲಿ ತೊಡಗಿಕೊಂಡಾಗಲಷ್ಟೇ ಸ್ವಸ್ಥ, ಪ್ರಗತಿಶೀಲ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಆದರೆ, 2014 ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರನ್ನು ದುಡಿಮೆಯಿಂದ ವಿಮುಕ್ತಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಮನುಷ್ಯನಿಗೆ ಕೆಲಸವಿಲ್ಲದೆ ಹೋದಾಗ ಆತನಲ್ಲಿ ಮೃಗತ್ವದ ಗುಣ ಮುನ್ನೆಲೆಗೆ ಬರುತ್ತದೆ. ಆಗ ಸಮಾಜದಲ್ಲಿ ಕ್ರೌರ್ಯ ಘಟನೆಗಳು ಹೆಚ್ಚುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಹಿಂದೆಂದೂ ಕಂಡರಿಯದಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಇನ್ನಾದರೂ ಕೇಂದ್ರ ಸರ್ಕಾರ ತನ್ನ ಆಡಳಿತ ವೈಖರಿ ಸರಿಪಡಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಯುವಜನತೆಗೆ ದುಡಿಮೆ ಇಲ್ಲದೆ ಹೊಟ್ಟೆಪಾಡಿಗಾಗಿ ಸಮಾಜಘಾತಕ ಕೆಲಸಗಳಲ್ಲಿ ತೊಡಗುತ್ತಿರುವುದು ಶೋಚನೀಯ. ನಮ್ಮ ಸಂವಿಧಾನದ ಭಾಗವಾಗಿ ದೇಶದ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ. ಇದು ದೇಶದ ಅಭಿವೃದ್ಧಿಗೆ ಕಂಟಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಸ್ವಾತಂತ್ರ್ಯ ಚಳುವಳಿಯಲ್ಲಿ ಮಡಿದಂತಹ ಲಕ್ಷಾಂತರ ಜನರ ಆಶಯವಾಗಿತ್ತು. ಆದರೆ, ಇವತ್ತು ಸಂವಿಧಾನದ ಆಶಯಗಳನ್ನು ಭಗ್ನ ಗೊಳಿಸುವ ರೀತಿಯಲ್ಲಿ ಕೇಂದ್ರ ಸರ್ಕಾರ ಪ್ರತಿಗಾಮಿ ವಿಧಾನಗಳಲ್ಲಿ ಮುಂದೆ ಸಾಗುತ್ತಿದೆ. ಜಾತ್ಯಾತೀತತೆ ಧರ್ಮನಿರಪೇಕ್ಷತೆ ಇಂದು ಸವಕಲು ನಾಣ್ಯಗಳಾಗಿವೆ’ ಎಂದು ಹೇಳಿದರು.

‘ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾದವರು ಇವತ್ತು ಕೋಮುವಾದದ ಮೂಲಕ ಜನರನ್ನು ಭಾವನಾತ್ಮಕವಾಗಿ ಮರಳು ಮಾಡುತ್ತಿದ್ದಾರೆ. ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಏರಿಕೆಯಾಗುತ್ತಿದೆ. ಅನೇಕ ಕಾಯ್ದೆಗಳ ತಿದ್ದುಪಡಿ ಮೂಲಕ ಕೃಷಿ ಕ್ಷೇತ್ರವನ್ನು ನಾಶ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ದುಡಿಯುವ ವರ್ಗ ಗುಲಾಮಗಿರಿ ವ್ಯವಸ್ಥೆ ಮರುಕಳುಹಿಸಲಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಖಾಸಗೀಕರಣ, ಕೋಮುವಾದೀಕರಣ ನಿಲ್ಲಿಸಬೇಕು. ಜನಪರ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಕೇಂದ್ರದ ಪ್ರತಿಗಾಮಿ ಧೋರಣೆಯ ವಿರುದ್ಧ ಯುವ ಜನರು ದಂಗೆ ಏಳಬೇಕಾಗಿದೆ. ಆ ನಿಟ್ಟಿನಲ್ಲಿ ಯುವಜನರನ್ನು ಸಂಘಟಿಸಿ ಜಿಲ್ಲೆಯಾದ್ಯಂತ ಪ್ರತಿರೋಧ ಉಂಟು ಮಾಡುವುದೇ ಸಮಾವೇಶದ ಮುಖ್ಯ ಉದ್ದೇಶ’ ಎಂದರು.

ಡಿವೈಎಫ್‌ಐ ಹಿರಿಯ ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಎಚ್‌.ಪಿ.ಲಕ್ಷ್ಮಿನಾರಾಯಣ, ಜಯರಾಮರೆಡ್ಡಿ, ರಘುರಾಮ ರೆಡ್ಡಿ, ರವಿಚಂದ್ರ ರೆಡ್ಡಿ, ಜಿಲ್ಲಾ ಸಂಘಟನಾ ಸಮಿತಿ ಸಂಚಾಲಕ ಹೇಮಚಂದ್ರ, ಸಹ ಸಂಚಾಲಕರಾದ ಕಿಶೋರ್, ಕಲಿಮುಲ್ಲಾ, ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT