ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಖುಷಿಕಂಡ ಉಷಾ

ಸಮಗ್ರ ಕೃಷಿ ಬೆಳೆ, ಹನಿ ನೀರಾವರಿಗೆ ಕೃಷಿ ವಿವಿ ಪ್ರಶಸ್ತಿ
Last Updated 20 ನವೆಂಬರ್ 2020, 2:22 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಉತ್ತಮವಾಗಿ ಬೆಳೆದ ತಾಲ್ಲೂಕಿನ ಐವಾರಪಲ್ಲಿ ಗ್ರಾಮದ ರೈತ ಮಹಿಳೆ ಎಲ್.ಉಷಾ ಸೋಮಶೇಖರರೆಡ್ಡಿರವರಿಗೆ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಹಾಗೂ ನಗದು ಬಹುಮಾನ ಲಭಿಸಿದೆ.‌

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನವೆಂಬರ್ 11ರಿಂದ 13 ರವರಿಗೂ ನಡೆದ ಕೃಷಿ ಮೇಳದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಹಾಗೂ ₹7,500 ನೀಡಿ ಗೌರವಿಸಲಾಗಿದೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐವಾರಪಲ್ಲಿ ಗ್ರಾಮದ ಸೋಮಶೇಖರರೆಡ್ಡಿ ಹಾಗೂ ಪತ್ನಿ ಎಲ್.ಉಷಾ 5.09 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಉಷಾರವರು ರಾಗಿ, ತೊಗರಿ, ಅವರೆ, ಜೋಳ, ತೆಂಗು, ಮಾವು, ಪಪ್ಪಾಯ, ಸೀಬೆ, ಜಂಬುನೇರಳೆ, ಸಪೋಟ ಹಾಗೂ ಟೊಮೆಟೊ, ಎಲೆಕೋಸು, ಕ್ಯಾರೆಟ್, ಬೀಟ್ ರೂಟ್ ಬೆಳೆಗಳನ್ನು ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆದಿದ್ದಾರೆ. ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದು, ರೇಷ್ಮೆ ಕೃಷಿಯನ್ನು ಸಹ ಅಳವಡಿಸಿಕೊಂಡಿದ್ದಾರೆ. ಪಶುಸಂಗೋಪನೆಯಲ್ಲಿ ಹಸು, ಮೇಕೆ, ಹಾಗೂ ಕೋಳಿ ಸಾಗಾಣಿಕೆ ಮಾಡುತ್ತಿದ್ದಾರೆ. ಇವುಗಳ ತ್ಯಾಜ್ಯಗಳಿಂದ ಗುಣಮಟ್ಟದ ಕೊಟ್ಟಿಗೆ
ಗೊಬ್ಬರ ತಯಾರಿಸಿ ಕೃಷಿಗೆ ಬಳಿಸಿಕೊಂಡಿದ್ದಾರೆ.

ಶ್ರೀಗಂಧ, ಹೆಬ್ಬೇವು, ತೇಗ, ಸಿಲ್ವರ್ ಓಕ್ ಮರಗಳನ್ನು ಬದುಗಳ ಮೇಲೆ ಬೆಳೆದು ಅರಣ್ಯ ಕೃಷಿಯನ್ನು ಅನುಸರಿಸಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಚೆಕ್ ಡ್ಯಾಂ, ಟ್ರೆಂಚುಗಳು, ಬದುಗಳನ್ನು ನಿರ್ಮಿಸಿಕೊಂಡು ಸಮಪಾತಳ ಕೃಷಿ ಮಾಡುವುದರ ಜೊತೆಗೆ ಬದುಗಳನ್ನು ಸದೃಢರಾಗಿಸಲು ಹುಲ್ಲನ್ನು ಬದುಗಳ ಮೇಲೆ ಬೆಳೆದಿದ್ದಾರೆ. ತೋಟಗಾರಿಕೆ ಬೆಳೆಗಳಿಗೆ ತುಂತುರು ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ. ನೀರಿನ ಶೇಖರಣೆಗೆ ಕೃಷಿ ಹೊಂಡವನ್ನು ಮಾಡಿಕೊಂಡಿದ್ದಾರೆ. ರಕ್ಷಣಾ ನೀರಾವರಿಯನ್ನು ಬೆಳೆಗಳಿಗೆ ಕೊಟ್ಟು ಬೆಳೆ ನಷ್ಟವನ್ನು ತಡೆಗಟ್ಟಿದ್ದರೆ.
ಪೌಷ್ಟಿಕ ಕೈ ತೋಟವನ್ನು ಸಹ ಹೊಂದಿದ್ದು, ಮನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಬೆಳೆದಿದ್ದಾರೆ. ತಾವು ಅಳವಡಿಸಿರುವ ಉತ್ತಮ ಕೃಷಿ ತಾಂತ್ರಿಕಕತೆಗಳನ್ನು ಇತರೆ ರೈತರಿಗೆ ತಿಳಿಸುತ್ತಾ ಮಾದರಿ ರೈತ ಮಹಿಳೆಯಾಗಿದ್ದಾರೆ.

‘ಅಂತರ್ಜಲ ಮಟ್ಟದ ಕುಸಿತದಿಂದ ಕೊಳವೆಬಾವಿಯಿಂದ ಕೇವಲ ಅರ್ಧ ಇಂಚಿನಲ್ಲಿ ನೀರು ಸಿಗುತ್ತಿದೆ. ಬರುವ ನೀರನ್ನೇ ಬಳಿಸಿಕೊಂಡು ಐದೂವರೆ ಎಕರೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಸಮಗ್ರ ಕೃಷಿ ಪದ್ಧತಿ ಬಳಿಸಿಕೊಂಡು ಉತ್ತಮವಾದ ಬೆಳೆಗಳನ್ನು ಬೆಳೆಯಲಾಗಿದೆ. ಮುಖ್ಯವಾಗಿ ಎಲ್ಲಾ ಬೆಳೆಗಳನ್ನು ಹನಿ ನೀರಾವರಿಯಿಂದ ಬೆಳೆಗಳನ್ನು ಬೆಳೆದಿದ್ದೇವೆ. ರೈತರು ಸಹ ತಮಗೆ ಇರುವ ಜಮೀನುಗಳಲ್ಲಿ ಸಾವಯುವ ಕೃಷಿಗಳನ್ನು ಹನಿನೀರಾವರಿ ಬಳಕೆ ಮಾಡಿಕೊಂಡರೆ, ಹೆಚ್ಚುವರಿ ಬೆಳೆಗಳನ್ನು ಬೆಳೆಯಬಹುದು’ ಎಂದು ಎಲ್.ಉಷಾ ಅಭಿಪ್ರಾಯಪಟ್ಟರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಬೆಳೆಗಳನ್ನು ರೈತರು ಬೆಳೆಯಲು ಅನೇಕ ಯೋಜನೆ ಹಾಗೂ ಅನುದಾನಗಳನ್ನು ನೀಡಿವೆ. ಸಾವಯುವ ಗೊಬ್ಬರ, ಮಣ್ಣಿನ ಸತ್ವ ಪರೀಕ್ಷೆಗಳನ್ನು ರೈತರು ವಿವಿಧ ಕೃಷಿ ಯಂತ್ರಗಳನ್ನು ಬಳಸಿಕೊಂಡು ಕೃಷಿ ಬೆಳೆಗಳನ್ನು ಬೆಳೆಯಬಹುದು. ಹನಿ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ರೈತರಿಗೆ
ರಿಯಾಯಿತಿ ದರದಲ್ಲಿ ಪರಿಕರಗಳನ್ನು ಕೃಷಿ ಇಲಾಖೆಯಿಂದ ನೀಡಲಾಗುವುದು. ರೈತರು ಗುಣಮಟ್ಟ ಹಾಗೂ
ಪೌಷ್ಟಿಕಾಂಶ ಬೆಳೆಗಳನ್ನು ಬೆಳೆಯಬಹುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT