ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮನ ಜಪದಲ್ಲಿ ಬಗೆಬಗೆ ಸೇವೆ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನ ಆಚರಣೆ, ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಮರಣೆ
Last Updated 2 ಅಕ್ಟೋಬರ್ 2019, 12:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ನಾಗರಿಕರು, ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವಿವಿಧ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ, ಉಭಯ ಮಹನೀಯರ ಉದಾತ್ತ ಚಿಂತನೆ ಗೌರವಿಸುವ ಕೆಲಸ ಮಾಡಿದರು.

ತಾಲ್ಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಪ್ಲಾಸ್ಟಿಕ್ ನಿಷೇಧ ಕುರಿತ ಅರಿವು ಮೂಡಿಸುವ ಜಾಥಾಗೆ ಚಾಲನೆ ನೀಡುವ ಜತೆಗೆ ಸ್ವತಃ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಮೂಲಕ ನಾಗರಿಕರು ಅಧಿಕಾರಿಗಳಿಗೆ ಸ್ಫೂರ್ತಿಯಾದರು.

ನಗರದ ಎಂ.ಜಿ.ರಸ್ತೆಯಲ್ಲಿ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳು ಬೆಳ್ಳಂಬೆಳಿಗ್ಗೆ ಜಲ್ಲಿ, ಸಿಮೆಂಟ್ ಮಿಶ್ರಣ ಮಾಡಿ ರಸ್ತೆಯುದ್ದಕ್ಕೂ ಬಿದ್ದ ಗುಂಡಿಗಳನ್ನು ಮುಚ್ಚಿ ಸವಾರರ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

‘ಪ್ಲಾಸ್ಟಿಕ್ ಶವಯಾತ್ರೆ’
ಮತ್ತೊಂದೆಡೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಂಧಿ ಜಯಂತಿ ಪ್ರಯುಕ್ತ ನಿಷೇಧಿತ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ವಿನೂತನ ‘ಪ್ಲಾಸ್ಟಿಕ್ ಶವಯಾತ್ರೆ’ ನಡೆಸುವ ಮೂಲಕ ನಾಗರಿಕರು, ವರ್ತಕರ ಗಮನ ಸೆಳೆದರು.

ನಗರಸಭೆ ಆವರಣದಿಂದ ಆರಂಭಗೊಂಡ ‘ಪ್ಲಾಸ್ಟಿಕ್ ಶವಯಾತ್ರೆ’ಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಚಾಲನೆ ನೀಡಿದರು. ನಗರಸಭೆಯ ನೂತನ ಆಯುಕ್ತ ಡಿ.ಲೋಹಿತ್, ನಿರ್ಗಮಿತ ಆಯುಕ್ತ ಉಮಾಕಾಂತ್ ಅವರು ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌, ಉತ್ಪನ್ನಗಳಿಂದ ಅಲಂಕರಿಸಿದ ಚಟ್ಟವನ್ನು ಹೊತ್ತು ಪೌರಕಾರ್ಮಿಕರು, ವಿದ್ಯಾರ್ಥಿಗಳೊಂದಿಗೆ ಬಜಾರ್ ರಸ್ತೆ, ಸಂತೆ ಮಾರುಕಟ್ಟೆ, ಬಿ.ಬಿ.ರಸ್ತೆ, ಶಿಡ್ಲಘಟ್ಟ ವೃತ್ತ, ಗಂಗಮ್ಮಗುಡಿ ರಸ್ತೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ನಗರದ ಗುರುಕುಲ ಆಶ್ರಮದಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮಿದೇವಮ್ಮ, ಗಾಂಧಿವಾದಿ ಬಿ.ಎಂ.ಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೋಹಮ್ಮದ್ ಉಸ್ಮಾನ್ ಹಾಜರಿದ್ದರು.

ಪ್ಲಾಸ್ಟಿಕ್ ನಿಷೇಧಕ್ಕೆ ಸಹಕರಿಸಿ
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು, ‘ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣದ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧವನ್ನು ಕಡ್ಡಾಯವಾಗಿ ಮಾಡಲು ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು’ ಎಂದು ಹೇಳಿದರು.

‘ತ್ಯಾಗ ಮತ್ತು ಬಲಿದಾನಕ್ಕೆ ಪ್ರತೀಕವಾದ ಗಾಂಧೀಜಿ ಅವರು ರಾಮರಾಜ್ಯ, ಸರ್ವೋದಯ, ಅಂತ್ಯೋದಯ ಪರಿಕಲ್ಪನೆಗಳ ಆಧಾರದ ಮೇಲೆ ದೇಶವನ್ನು ನಿರ್ಮಾಣ ಮಾಡುವ ಪಣತೊಟ್ಟಿದ್ದರು. ಅವರ ಕನಸನ್ನು ಸಾಕಾರಗೊಳಿಸಲು ನಾವು ಇಂದು ಶ್ರಮಿಸುವ ಅಗತ್ಯವಿದೆ. ಕಟ್ಟುನಿಟ್ಟಿನ ಕಾನೂನು ಜಾರಿ ಮಾತ್ರದಿಂದ ಪ್ಲಾಸ್ಟಿಕ್ ನಿಷೇಧ ಸಾಧ್ಯವಿಲ್ಲ. ಅದಕ್ಕೆ ನಾಗರಿಕರ ಸಹಭಾಗಿತ್ವ ಕೂಡ ಅಗತ್ಯವಿದೆ’ ಎಂದು ತಿಳಿಸಿದರು.

ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಇಲಾಖೆ ಹೊರತಂದಿರುವ ‘ಪಾಪು- ಬಾಪು’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ‘ಮಹಾತ್ಮ ಗಾಂಧೀಜಿ 150’ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಧರ್ಮಗ್ರಂಥಗಳಾದ ಭಗವದ್ಗೀತೆ, ಕುರಾನ್, ಬೈಬಲ್ ಪಠಿಸಲಾಯಿತು.

ಶಾಲಾ ಕಾಲೇಜಿನ ಪ್ರಾಂಶುಪಾಲ ಕೋಡಿ ರಂಗಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ, ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT