ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಪ್ಪನ್ ಮೀಸೆಯ ಪತಂಗ

Last Updated 15 ಜುಲೈ 2022, 8:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ದೇಶದಪೇಟೆಯಲ್ಲಿ ಮಳೆಗೆ ಬೆಳೆದಿದ್ದ ಕಳೆ ಗಿಡಗಳ ಎಲೆಯ ಮೇಲೆ ವಿಚಿತ್ರ ಕೀಟವೊಂದು ಗುರುವಾರ ಬೆಳಿಗ್ಗೆ ಪ್ರತ್ಯಕ್ಷವಾಗಿತ್ತು.

ದಪ್ಪ ಹೊಟ್ಟೆ, ದೊಡ್ಡ ಕಣ್ಣುಗಳು, ಅಗಲವಾದ ರೆಕ್ಕೆ, ಪಾಚಿ ಬಣ್ಣದಲ್ಲಿ ಹಾಗೂ ರೆಕ್ಕೆಯ ಮೇಲೆ ಕೆಂಪು ಬಿಳಿ ಬಣ್ಣದಲ್ಲಿ ಕಣ್ಣುಗಳು ಮತ್ತು ವೀರಪ್ಪನ್ ಮೀಸೆ ಬರೆದಂತಿತ್ತು. ಬೆಳಗಾಗಿದ್ದರಿಂದ ಕದಲದೇ ಹಾಗೆಯೇ ಕುಳಿತಿತ್ತು. ಅದನ್ನು ಶಾಲೆಗೆ ಹೊರಟಿದ್ದ ಮಕ್ಕಳೆಲ್ಲ ನೋಡಿ ಅಚ್ಚರಿಪಟ್ಟರು. ನೆರೆಹೊರೆಯವರು ಕೂಡ ಈ ಸೋಜಿಗಕ್ಕೆ ಸಾಕ್ಷಿಯಾದರು.

‘ಇದರ ಹೆಸರು ಓಲಿಯಾಂಡರ್ ಹಾಕ್ ಮಾತ್ ಅಥವಾ ಓಲಿಯಾಂಡರ್ ಹಾಕ್ ಪತಂಗ. ಸಾಮಾನ್ಯವಾಗಿ ನಂದಿಬಟ್ಟಲು, ಕಣಿಗಿಲೆ ಮೊದಲಾದ ಹಾಲು ಸ್ರವಿಸುವ ಮಿಲ್ಕ್ ವೀಡ್ ಸಸ್ಯಗಳನ್ನು ಆಹಾರವಾಗಿ ಸೇವಿಸುವ ದಪ್ಪ ಗಾತ್ರದ ಕಂಬಳಿ ಹುಳುಗಳು ರೂಪಾಂತರಗೊಂಡು ಓಲಿಯಾಂಡರ್ ಹಾಕ್ ಪತಂಗಗಳಾಗುತ್ತವೆ’ ಎಂದು ಉಪನ್ಯಾಸಕ ಅಜಿತ್ ತಿಳಿಸಿದರು.

ಮುದ್ದೆ ಮುದ್ದೆಯಂತಿರುವ, ಸದಾ ತಿನ್ನುವ ಬಕಾಸುರನಂತಹ ಈ ಕಂಬಳಿ ಹುಳುಗಳು ಸುಂದರ ರೆಕ್ಕೆಗಳಿರುವ ಪತಂಗಗಳಾಗಿ ಮಾರ್ಪಾಡುವುದು ನಿಸರ್ಗದ ಸೋಜಿಗಗಳಲ್ಲೊಂದು. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ಒಣ ಎಲೆಗಳ ಮರೆ ಸೇರಿಬಿಡುತ್ತವೆ. ಮಣ್ಣಿನ ಬಣ್ಣದ ಕವಚ ಕಟ್ಟಿಕೊಂಡು ಮಣ್ಣಿನಲ್ಲಿ ಸೇರಿ ಪ್ಯೂಪಾ ಆಗಿ ನಂತರ
ಪತಂಗವಾಗುತ್ತವೆ.

ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ, ಕೆಲವು ವ್ಯತ್ಯಾಸಗಳಿರುತ್ತವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ, ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪ ಮೈ. ಹಂಚಿಕಡ್ಡಿ ಮೀಸೆ.

‘ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ವಿರಳ. ಅಪರೂಪಕ್ಕೊಮ್ಮೆ ಈ ರೀತಿ ಕಂಡುಬರುತ್ತವೆ. ಇದು ತಾಳ್ಮೆಯಿಂದ ಅಭ್ಯಸಿಸುವ, ಗಮನಿಸುವ, ಸಂತಸ ಪಡುವ ಕೌತುಕಲೋಕ’ ಎಂದು ಅಜಿತ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT