ಸೋಮವಾರ, ಡಿಸೆಂಬರ್ 9, 2019
24 °C

ಪಶು ವೈದ್ಯೆ ಹತ್ಯೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಹೈದರಾಬಾದಿನ ಪಶುವೈದ್ಯೆ ಡಾ.ಪ್ರಿಯಾಂಕಾ ರೆಡ್ಡಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಲೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಆಗ್ರಹಿಸಿ ಜಿಲ್ಲೆಯ ಪಶು ವೈದ್ಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರಿಗೆ ಮನವಿ ಕಳುಹಿಸಿದರು.

ಈ ವೇಳೆ ಮಾತನಾಡಿದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಧುರನಾಥ್ ರೆಡ್ಡಿ, ‘ಭಾರತ ದೇಶ ಸಹಸ್ರಾರು ವರ್ಷಗಳಿಂದ ಹೆಣ್ಣನ್ನು ಮಾತೃ ಸ್ವರೂಪದಲ್ಲಿ ಪೂಜಿಸುತ್ತಾ ಬಂದಿರುವ ಪುಣ್ಯಭೂಮಿ. ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಅತ್ಯಾಚಾರ ಮಾಡಿ ಜೀವಂತವಾಗಿ ಸುಟ್ಟು ಹಾಕುವ ಮಟ್ಟಕ್ಕೆ ಇಳಿಯುತ್ತಿರುವುದು ಕಳವಳದ ಸಂಗತಿ’ ಎಂದು ಹೇಳಿದರು.

‘ಡಾ.ಪ್ರಿಯಾಂಕಾರೆಡ್ಡಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಿ, ದೇಶದ ಕಾನೂನು ಸಶಕ್ತವಾಗಿದೆ ಎಂದು ತೋರಿಸುವ ಅವಶ್ಯಕತೆಯಿದೆ. ದೇಶದ ನ್ಯಾಯ ವ್ಯವಸ್ಥೆ ಬಿಗಿಯಾಗಬೇಕು. ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಟ್ಟೆಚ್ಚರ ವಹಿಸಿ, ಮಕ್ಕಳಲ್ಲಿ ನೈತಿಕತೆ ಮಾನವೀಯ ಅನುಕಂಪ ಬಿತ್ತುವ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕಿರುಕುಳ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ಶಿಕ್ಷೆ ಪ್ರಮಾಣ ಮಾತ್ರ ಕಡಿಮೆ ಇದೆ. ಮಹಿಳೆಯರ ಅಭದ್ರತೆಗೆ ಕಾರಣವಾದ ಅಶ್ಲೀಲ ಸಿನಿಮಾ, ಜಾಹೀರಾತುಗಳನ್ನು ನಿಷೇಧಿಸದೆ ವ್ಯಾಪಕ ಪ್ರಚಾರಕ್ಕೆ ಅನುಮತಿ ನೀಡುತ್ತಿರುವ ಪರಿಣಾಮ ಮಹಿಳೆಯರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಹಾಗಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು. ಪಶು ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಬೈರಾರೆಡ್ಡಿ, ಉಪಾಧ್ಯಕ್ಷ ಡಾ.ಮುನಿನಾರಾಯಣರೆಡ್ಡಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜ್, ಸಹಾಯಕ ನಿರ್ದೇಶಕರಾದ ಡಾ.ಮಾರುತಿ, ಡಾ.ಜಯಶಂಕರ್, ಡಾ.ಭಾಸ್ಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)