ಬಾಗೇಪಲ್ಲಿ: ನಾಳೆ ನೌಕರರ ಒಕ್ಕೂಟದಿಂದ ವಿಧಾನಸೌಧ ಚಲೋ

ಬಾಗೇಪಲ್ಲಿ: 7ನೇ ವೇತನ ಆಯೋಗದ ವಿಳಂಬ, ಎನ್‌ಪಿಎಸ್ ರದ್ದತಿ ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಕೆಎಸ್‍ಜಿಇಎಫ್)ದ ನೇತೃತ್ವದಲ್ಲಿ ಫೆಬ್ರುವರಿ 7ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್.ಎಸ್.ಜೈಕುಮಾರ್ ತಿಳಿಸಿದರು.
ಪಟ್ಟಣದ ಬ್ಲೂಮ್ಸ್ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ 7ನೇ ವೇತನ ಆಯೋಗದ ವಿಳಂಬ ಹಾಗೂ ಎನ್‌ಪಿಎಸ್ ರದ್ದತಿ ಕುರಿತು ನಡೆದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಅಂಕಿ ಅಂಶಗಳಂತೆ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸರ್ಕಾರಿ ನೌಕರರಿಗೆ ಶೇ 40ರಷ್ಟು ವೇತನ ತಾರತಮ್ಯ ಇದೆ. ಆರ್ಥಿಕ ಇಲಾಖೆಯಲ್ಲಿ ಅಸಮಾನತೆ ಇದೆ. ಶ್ರೀಮಂತರಾದ ಅದಾನಿ, ಅಂಬಾನಿಯಂತಹವರಿಗೆ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಲು, ದುಡಿಯುವ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಲ್ಲಿ ಎನ್‌ಪಿಎಸ್, ಓಪಿಎಸ್ ಎಂಬ ಅಸಮಾನತೆಯನ್ನು ಸರ್ಕಾರ ತೊಲಗಿಸಬೇಕು. ನೌಕರರು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ಸರ್ಕಾರಿ ನೌಕರರ ಬೇಡಿಕೆಗಳು ಈಡೇರಲು ಸಾಧ್ಯ
ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ ಮಾತನಾಡಿ, ಕೆಸಿಎಸ್‌ಆರ್ ನಿಯಮಗಳಂತೆ ಸರ್ಕಾರಿ ನೌಕರರು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಿ ಹೋರಾಟ ಮಾಡಬೇಕು. ಸಂವಿಧಾನದಲ್ಲಿ ಎಲ್ಲಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸ್ಟಷ್ಟವಾಗಿದೆ. ಹೊರಗುತ್ತಿಗೆ, ಗುತ್ತಿಗೆ ಸೇರಿದಂತೆ ಇತರೆ ಸೇವೆ ಮಾಡುವ ನೌಕರರಿಗೆ ಸಮಾನ ವೇತನ ನೀಡಬೇಕು. ಖಾಸಗೀಕರಣದ ಹೆಸರಿನಲ್ಲಿ 6,796 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲು ಹೊರಟಿದೆ. ಇದರಿಂದ ಶ್ರೀಮಂತರ ಮಕ್ಕಳಿಗೆ ತೊಂದರೆ ಆಗುವುದಿಲ್ಲ. ಗ್ರಾಮೀಣ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಮಾರಕ ಆಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗಪ್ಪ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಮಂಜುನಾಥ್, ಮಹಬೂಬ್ ಭಾಷ, ಡಿ.ಟಿ.ಮುನಿಸ್ವಾಮಿ, ವೆಂಕಟೇಶ್ವರ, ಇಸಿಒ ಚಂದ್ರಶೇಖರ್, ನಾಗಮಲ್ಲರೆಡ್ಡಿ, ಎಚ್.ಆರ್.ಸುಬ್ರಮಣ್ಯ, ಎಪಿಎಂಸಿ ಮಂಜುನಾಥ್, ಬಿ.ಎಲ್.ಆಂಜಿನಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.