ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

Last Updated 17 ಸೆಪ್ಟೆಂಬರ್ 2019, 12:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಲೋಹಗಳ ಕಸುಬುಗಳನ್ನು ಮಾಡುವ ಮೂಲಕ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದು ಉಪ ತಹಶೀಲ್ದಾರ್ ಜಿ.ವಿ.ತುಳಸಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವ, ವಿಷ್ಣು, ಇಂದ್ರ ಮುಂತಾದ ದೇವರಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟ ವಿಶ್ವಕರ್ಮ ಅವರ ಕೌಶಲ, ತಾಳ್ಮೆ ಇಂದಿನ ಯುವ ಜನರಿಗೆ ಮಾದರಿಯಾಗಬೇಕು. ವಿಶ್ವಕರ್ಮ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಶೈಕ್ಷಣಿಕವಾಗಿ ಮುಂದೆ ತರಬೇಕು. ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮುದಾಯದ ಮುಖಂಡರು ಶ್ರಮಿಸಬೇಕು’ ಎಂದು ಹೇಳಿದರು.

‘ವಿಶ್ವಕರ್ಮ ಸಮುದಾಯ ಕಲೆ, ಸಂಗೀತ ಕ್ಷೇತ್ರ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ವಜ್ರ, ಬಂಗಾರ, ಬೆಳ್ಳಿ ವ್ಯಾಪಾರವಲ್ಲದೆ, ರಾಜಕೀಯ ಕ್ಷೇತ್ರದಲ್ಲಿ ಕೂಡ ತನ್ನದೇ ಆದ ಛಾಪು ಮೂಡಿಸಿದೆ. ವಿವಿಧ ದೇವರ ಮೂರ್ತಿಗಳಿಗೆ ಒಂದು ರೂಪು ನೀಡುವ ಮೂಲಕ ಉತ್ತಮ ಸಮಾಜ ಕಲ್ಪಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ’ ಎಂದರು.

ವಿಶ್ವಕರ್ಮ ಸಮುದಾಯ ಮುಖಂಡ ರಾಮಕೃಷ್ಣ ಮಾತನಾಡಿ, ‘ಪಂಚ ಲೋಹಗಳನ್ನು ಬಳಸಿ ಬಗೆಬಗೆಯ ಸಾಧನ-, ಸಲಕರಣೆಗಳು, ಮೂರ್ತಿಗಳನ್ನು ಸಿದ್ಧಪಡಿಸುವ ಕರಕುಶಲತೆ ಹೊಂದಿರುವ ವಿಶ್ವಕರ್ಮ ಸಮುದಾಯದವರ ಕೈಯಲ್ಲಿ ಕಲ್ಲುಗಳು ಕೂಡ ಶಿಲೆಯಾಗಿ ಅರಳುತ್ತವೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡ ವಿಶ್ವಕರ್ಮ ಅವರಿಗೆ ಇಡೀ ವಿಶ್ವವೇ ಋಣಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ವಿಶ್ವಕರ್ಮ ಉತ್ಸವ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ.ನವೀನ್‌ ಕುಮಾರ್, ಸಮುದಾಯದ ಮುಖಂಡರಾದ ಬ್ರಹ್ಮಚಾರಿ, ಮಂಜುನಾಥ್, ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT