ಗುರುವಾರ , ಜುಲೈ 29, 2021
26 °C
ಸರ್ ಎಂ.ವಿ.ಕಾರ್ಮಿಕರ ಸೇವಾ ಸಂಘದ ಪದಾಧಿಕಾರಿಗಳಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ವಿಶ್ವೇಶ್ವರಯ್ಯ ಅವಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರನ್ನು ಅವಮಾನಿಸಿ ಮಾತನಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬುಧವಾರ ಸರ್ ಎಂ.ವಿ.ಕಾರ್ಮಿಕರ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸರ್ ಎಂ.ವಿ.ಕಾರ್ಮಿಕರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಪ್ರಕಾಶ್, ‘ಇತ್ತೀಚೆಗೆ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ ಅವರು ಸುದ್ದಿಗೋಷ್ಠಿ ನಡೆಸಿ ವಿಶ್ವೇರಯ್ಯನವರ ಬಗ್ಗೆ ತುಂಬಾ ಹಗುರವಾಗಿ ಮತ್ತು ಹೀನಾಯವಾಗಿ ಮಾತನಾಡುವ ಜತೆಗೆ ಅವರ ಪ್ರತಿಮೆ ನಿರ್ಮಿಸಿದರೆ ಒಡೆದು ಹಾಕುವುದಾಗಿ ಹೇಳಿರುವುದು ಖಂಡನೀಯ’ ಎಂದು ಹೇಳಿದರು.

‘ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದ ದಿವಾನರಷ್ಟೆ. ದಿವಾನರಿಗೆ ಕೊಡುವ ಸಂಬಳವನ್ನು ರಾಜವಂಶಸ್ಥರು ಕೊಟ್ಟಿದ್ದಾರೆ. ಕೆ.ಆರ್.ಎಸ್ ಆಣೆಕಟ್ಟು ಕಟ್ಟುವಾಗ ವಿಶ್ವೇಶ್ವರಯ್ಯ ಅವರು ಬರೀ ಗಾರೆಕೆಲಸದ ಮೇಸ್ತ್ರಿಯಂತಿದ್ದರು. ಅವರ ಪ್ರತಿಮೆಯನ್ನು ಆಣೆಕಟ್ಟೆ ಬಳಿ ಸ್ಥಾಪಿಲು ಸಾಧ್ಯವಿಲ್ಲ ಎಂದು ಉದ್ಧಟನದಿಂದ ಏಕವಚನದಲ್ಲಿ ಮಾತನಾಡಿರುವುದು ಶೋಭೆ ತರುವ ವಿಚಾರವಲ್ಲ’ ಎಂದು ತಿಳಿಸಿದರು.

‘ಆಣೆಕಟ್ಟೆ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಜತೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಿದರೆ ಮುಲಾಜಿಲ್ಲದೇ ಒಡೆದು ಉರುಳಿಸುತ್ತೇವೆ ಎಂದು ತುಚ್ಛವಾಗಿ ಹೇಳುವ ಜತೆಗೆ ರಕ್ತಪಾತವೇ ಆಗಲಿ ಎನ್ನುವ ಮೂಲಕ ಜಿಲ್ಲೆ ಜಿಲ್ಲೆಗಳ ನಡುವೆ ಬಹಿರಂಗ ಜಗಳಕ್ಕೆ ಪ್ರಚೋದನೆ ನೀಡಿದ್ಧಾರೆ’ ಎಂದು ಆರೋಪಿಸಿದರು.

‘ಜಗದ್ವಿಖ್ಯಾತ ಎಂಜಿನಿಯರ್, ಭಾರತರತ್ನ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರಯ್ಯ ಅವರನ್ನು ಅವಮಾನಿಸಿ ಮಾತನಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಂದೆ ಮೈಸೂರಿಗರಿಂದ ಇಂತಹ ಹೇಳಿಕೆಗಳು ಬಂದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ’ ಎಂದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಸರ್ ಎಂ.ವಿ.ಕಾರ್ಮಿಕರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿ.ಮೂರ್ತಿ, ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡ ನಂದಿ ಪುರುಷೋತ್ತಮ, ಪದಾಧಿಕಾರಿಗಳಾದ ಮುರಳಿ, ಚೌಡಪ್ಪ, ಅಂಬರೀಶ್, ಸ್ಟುಡಿಯೋ ಮೂರ್ತಿ, ಪ್ರಭಾವತಿ, ಮಂಜು, ಕೃಷ್ಣಪ್ಪ, ಕೃಷ್ಣಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು