ಸೋಮವಾರ, ಫೆಬ್ರವರಿ 24, 2020
19 °C
ನಗರಸಭೆ ಚುನಾವಣೆಯಲ್ಲಿ ಸೋಲು: ಪತ್ರಿಕಾಗೋಷ್ಠಿ ಮೂಲಕ ಬೇಸರ ಹೊರಹಾಕಿದ 28ನೇ ವಾರ್ಡ್‌ನ ಪರಾಜಿತ ಜೆಡಿಎಸ್‌ ಅಭ್ಯರ್ಥಿ ಕಿಸಾನ್ ಕೃಷ್ಣಪ್ಪ

ಮತದಾರರ ತೀರ್ಪು ನೋವುಂಟು ಮಾಡಿದೆ: ಕಿಸಾನ್ ಕೃಷ್ಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸಿದ ನನ್ನಂತಹ ಪ್ರಾಮಾಣಿಕ ವ್ಯಕ್ತಿಗೆ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಸೋಲು ಉಂಟಾಗಿರುವುದು ತೀವ್ರ ನೋವು ಉಂಟು ಮಾಡಿದೆ. ಆದ್ದರಿಂದ, ಜೆಡಿಎಸ್‌ನಲ್ಲಿ ಉಳಿಯಬೇಕೇ ಅಥವಾ ಸಕ್ರಿಯ ರಾಜಕಾರಣದಿಂದ ದೂರ ಇರಬೇಕೇ ಎಂದು ನಾಯಕರಾದ ಕೆ.ಪಿ.ಬಚ್ಚೇಗೌಡ ಮತ್ತು ಹಿತೈಷಿಗಳ ಜತೆ ಚರ್ಚೆ ಮಾಡಿ ನನ್ನ ಮುಂದಿನ ನಿಲುವು ಪ್ರಕಟಿಸುತ್ತೇನೆ’ ಎಂದು 28ನೇ ವಾರ್ಡ್‌ನ ಪರಾಜಿತ ಜೆಡಿಎಸ್‌ ಅಭ್ಯರ್ಥಿ ಕಿಸಾನ್ ಕೃಷ್ಣಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಗೆದ್ದ ವೇಳೆ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇತ್ತು. ಒಂದೇ ಒಂದು ಕೊಳವೆಬಾವಿ ಸರಿಯಾಗಿ ನೀರು ಪೂರೈಸುತ್ತಿರಲಿಲ್ಲ. ಕುಡಿಯಲು, ಸ್ನಾನ ಮಾಡಲು ಕೂಡ ನೀರು ಸಿಗುತ್ತಿರಲಿಲ್ಲ. ನಾನು ಶಾಸಕ ಸುಧಾಕರ್ ಅವರಿಗೆ ಮನವಿ ಮಾಡಿ, ಐದು ಕೊಳವೆ ಬಾವಿ ಕೊರೆಯಿಸಿ ದಿನದ 24 ಗಂಟೆ ನೀರಿನ ಪೂರೈಕೆ ವ್ಯವಸ್ಥೆ ಮಾಡುವ ಮೂಲಕ ನೀರಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೆ’ ಎಂದು ಹೇಳಿದರು.

‘ಈ ಹಿಂದೆ ವಾರ್ಡ್‌ನಲ್ಲಿ ಬಹುತೇಕ ಮಣ್ಣಿನ ರಸ್ತೆಗಳು ಇದ್ದವು. ನಾನು ನಗರೋತ್ಥಾನ, ವಿಶೇಷ ಅನುದಾನದಲ್ಲಿ ತಲಾ 1,500 ಮೀಟರ್‌ ಕಾಂಕ್ರಿಟ್‌ ರಸ್ತೆ, ಚರಂಡಿ ಅಭಿವೃದ್ಧಿಪಡಿಸಿದೆ. 750 ಮೀಟರ್‌ ಡಾಂಬರೀಕರಣ ಮಾಡಿಸಿದೆ. ನನ್ನ ಅವಧಿಯಲ್ಲಿ ಯಾವೊಬ್ಬ ವ್ಯಕ್ತಿ, ಗುತ್ತಿಗೆದಾರನಿಂದ ನಯಾಪೈಸೆ ಪಡೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮತೃಪ್ತಿ ಇದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಈ ಬಾರಿಯ ಚುನಾವಣೆಯಲ್ಲಿ ನನಗೆ ಬರೀ 183 ಮತಗಳು ಬಂದಿವೆ. ಇದು ನನಗೆ ನೋವು ಉಂಟು ಮಾಡಿದೆ’ ಎಂದರು.

‘ನಗರಸಭೆ ಚುನಾವಣೆಗೂ ಪೂರ್ವಭಾವಿಯಾಗಿ ವಾರ್ಡ್‌ ಮತದಾರರಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ವೇಳೆ ಪ್ರತಿಯೊಬ್ಬರೂ ಸಕಾರಾತ್ಮಕ ಬೆಂಬಲ ವ್ಯಕ್ತಪಡಿಸಿದ್ದರು. ಒಂದೇ ಒಂದು ನಕಾರಾತ್ಮಕ ಪ್ರತಿಕ್ರಿಯೆ ಇರಲಿಲ್ಲ. ನೀವು ಪ್ರಚಾರಕ್ಕೆ ಬರಬೇಡಿ ನಾವು ಮತ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. 2013ರ ಚುನಾವಣೆಯಲ್ಲಿ ನನಗೆ 327 ಮತಗಳು ಬಂದಿದ್ದವು. ಆದರೆ ಈ ಬಾರಿ ಅದರ ಅರ್ಧದಷ್ಟು ಮತಗಳು ಕಡಿಮೆಯಾಗಿವೆ. ಮೂರನೇ ಸ್ಥಾನಕ್ಕೆ ಇಳಿಸಿದ್ದು ಬೇಸರ ಮೂಡಿಸಿದೆ’ ಎಂದು ತಿಳಿಸಿದರು.

‘25 ಮತ್ತು 27ನೇ ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ಮಾಡಿಕೊಂಡ ಒಳ ಒಪ್ಪಂದಗಳು ಕೂಡ 28ನೇ ವಾರ್ಡ್‌ ಮೇಲೆ ಪ್ರಭಾವ ಬೀರಿ, ನನ್ನ ಸೋಲಿಗೆ ಕಾರಣವಾಯಿತು. ಸುಧಾಕರ್ ಅವರು ನಾನು ಕೇಳಿದ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಪೂರ್ಣ ಪ್ರಮಾಣದ ಕೆಲಸ ಮಾಡಿರುವೆ. ನಾನು ಮಾಡಿದ ಕೆಲಸ ನೋಡಿದವರೆಲ್ಲ ನನ್ನನ್ನು ಗೆಲ್ಲಿಸಬೇಕಿತ್ತು. ಯಾಕೆ ಹೀಗೆ ಮಾಡಿದರು ತಿಳಿಯುತ್ತಿಲ್ಲ’ ಎಂದು ಹೇಳಿದರು.

‘ಸುಧಾಕರ್ ಅವರು ಈ ಹಿಂದೆ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆದರೆ ನಾನು ಜಾತ್ಯತೀತ ಪಕ್ಷ ಬಿಟ್ಟು ಹೋಗಲು ಒಪ್ಪಲಿಲ್ಲ. ನನ್ನಂತಹ ಪ್ರಾಮಾಣಿಕ ವ್ಯಕ್ತಿಗೆ ಸೋಲು ಬರಬಾರದಿತ್ತು. ನನಗೆ ಮತ ಹಾಕಿದವರಿಗೆ ಹಾಗೂ ಚುನಾವಣೆಯಲ್ಲಿ ದುಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ವಾರ್ಡ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು