ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಎನ್.ವ್ಯಾಲಿಯಿಂದ 24 ಕೆರೆಗೆ ನೀರು

₹74 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಕಾಮಗಾರಿಗೆ ಭೂಮಿಪೂಜೆ
Last Updated 2 ಫೆಬ್ರುವರಿ 2023, 6:57 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಹೆಬ್ಬಾಳ-ನಾಗವಾರದಿಂದ ತಾಲ್ಲೂಕಿನ 24 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಿರುವುದರಿಂದ ಈ ಭಾಗದಲ್ಲಿ ಅಂರ್ತಜಲ ವೃದ್ಧಿಯಾಗಿ, ರೈತರು ಬೆಳೆಯುವ ಬೆಳೆಗಳಿಗೆ ಸದಾ ನೀರು ಲಭಿಸಲಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ತಾಲ್ಲೂಕಿನ ಮಲ್ಲಿಗುರ್ಕಿ ಗ್ರಾಮದ ಬಳಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕಿನ 24 ಕೆರೆಗಳಿಗೆ ₹74 ಕೋಟಿ ವೆಚ್ಚದಲ್ಲಿ ಎಚ್.ಎನ್.ವ್ಯಾಲಿಯಿಂದ ಏತ ನೀರಾವರಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು.

ತಾಲ್ಲೂಕಿನ ಕೆರೆಗಳಿಗೆ ಎಚ್.ಎನ್.ವ್ಯಾಲಿಯಿಂದ ನೀರು ಹರಿಸದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡುತ್ತೇನೆ ಎಂದು ಸರ್ಕಾರಕ್ಕೆ ತಿಳಿಸಿದ್ದೆ. ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ₹74 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಆಗಿ 4 ವರ್ಷ ಆಗಿದೆ. ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡುವಂತೆ ಹಾಲಿ ಸರ್ಕಾರದ ಸಚಿವರ ಬಳಿ ಅನೇಕ ಬಾರಿ ಮನವಿ ಮಾಡಿದ್ದೇನೆ. ಆದರೆ ಸಚಿವರು ಆಗಮಿಸಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಎಂಟಿಬಿ ನಾಗರಾಜ್ ಅವರ ಮೌಖಿಕ ಆದೇಶದಂತೆ ಅವರ ಅನುಪಸ್ಥಿತಿಯಲ್ಲಿ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.

10 ವರ್ಷಗಳ ಶಾಸಕರ ಅವಧಿಯಲ್ಲಿ ಕುಡಿಯುವ ನೀರು, ರಸ್ತೆಗಳು, ಶಾಲಾ-ಕಾಲೇಜು, ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ ಕೆಲ ರಾಜಕೀಯ ವಿರೋಧಿಗಳು ಶಾಸಕರು ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಹೇಳುವುದು ರಾಜಕೀಯ ಪ್ರೇರಿತವಾಗಿದೆ. ನನ್ನ ಅಭಿವೃದ್ಧಿ ಬಗ್ಗೆ ಮಾತನಾಡುವವರು ನೇರವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಓಂಶಕ್ತಿ, ಧರ್ಮಸ್ಥಳ, ಶಬರಿಮಲೆಗೆ ಜನರನ್ನು ಕಳಿಸುವುದು ಅಭಿವೃದ್ಧಿ ಅಲ್ಲ. ಚುನಾವಣೆ ಅವಧಿಯಲ್ಲಿ ಕೆಲವರು ಸಮಾಜ ಸೇವಕರ ಹೆಸರಿನಲ್ಲಿ ಆಗಮಿಸಿ, ಜನರಿಗೆ ಆಸೆ, ಆಮಿಷಗಳು, ಹಣ ಹಂಚಿದರೆ ಕ್ಷೇತ್ರದಲ್ಲಿ ಶಾಸಕರು ಆಗುವುದು ಹಗಲುಕನಸು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೂರಗಮಡುಗು ಲಕ್ಷ್ಮಿನರಸಿಂಹಪ್ಪ ಮಾತನಾಡಿ, ಬಿಜೆಪಿಯ ಮುನಿರಾಜು, ರಾಮಲಿಂಗಪ್ಪ ಅವರು ಜನರನ್ನು ಪ್ರವಾಸಕ್ಕೆ ಕಳಿಸುವ ನೆಪದಲ್ಲಿ ಆಧಾರ್ ಪಡೆದು, ಬಿಜೆಪಿ ಸದಸ್ಯತ್ವ ಮಾಡಿಸುತ್ತಿದ್ದಾರೆ. ಮರವಪಲ್ಲಿ ತಾಂಡಾಕ್ಕೆ ಸಂಚರಿಸುವ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಮಿಥುನ್ ರೆಡ್ಡಿ ಹೇಳಿದ್ದಾರೆ. 3 ತಿಂಗಳು ಕಳೆದರೂ ಇದುವರಿಗೂ ರಸ್ತೆ ಮಾಡಿಲ್ಲ ಎಂದರು.

ಎಚ್.ಎನ್.ವ್ಯಾಲಿಯ ಯೋಜನೆಯ ಸಹಾಯಕ ಎಂಜಿನಿಯರ್‌ ಗೋಪಾಲ್, ಗುತ್ತಿಗೆದಾರ ಶ್ರೀನಿವಾಸ್, ಯರ್ರಿಕಿಟ್ಟಪ್ಪ, ಆಚೇಪಲ್ಲಿ ಪ್ರಭಾಕರರೆಡ್ಡಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಅಮರನಾಥ ರೆಡ್ಡಿ, ಕೆಎನ್‍ಎಸ್‍ ಕೃಷ್ಣಪ್ಪ, ಚಂದ್ರಶೇಖರ ರೆಡ್ಡಿ, ಕಾಮರೆಡ್ಡಿ, ನಾರಾಯಣಸ್ವಾಮಿ, ಅಶ್ವಥ್ಥಪ್ಪ, ಮಂಜುನಾಥ್, ಶ್ರೀರಾಮರೆಡ್ಡಿ, ಬಾಬು, ಶಿವಾರೆಡ್ಡಿ, ಆನಂದ್, ಕೃಷ್ಣಮೂರ್ತಿ, ಬೂರಗಮಡುಗು ನರಸಿಂಹಪ್ಪ ಇದ್ದರು.

ಕಾರ್ಯಕ್ರಮ ಅಧಿಕೃತವಲ್ಲ
ಚಿಕ್ಕಬಳ್ಲಾಪುರ:
ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳನ್ನು ತುಂಬಿಸುವ ಎಚ್.ಎನ್ ವ್ಯಾಲಿ ಯೋಜನೆಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ ನೀಡಿದ್ದಾರೆ. ಆದರೆ ಶಾಸಕರು ಮಾಡಿರುವ ಕಾರ್ಯಕ್ರಮ ಅಧಿಕೃತವಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ಕಾರ್ಯಕ್ರಮವನ್ನು ಶಾಸಕರು ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿರುವ ಯೋಜನೆ ಇದು. ರಾಜ್ಯ ಬಿಜೆಪಿ ಸರ್ಕಾರ ಈ ಯೋಜನೆಗೆ ₹ 74 ಕೋಟಿ ಅನುದಾನ ನೀಡಿದೆ. ಇವರ ಸರ್ಕಾರ ಕೊಟ್ಟಿಲ್ಲ. ಹಾಗಾಗಿ ಇದನ್ನು ಸರ್ಕಾರದ ಕಾರ್ಯಕ್ರಮವಾಗಿ ಮಾಡಬೇಕಿದೆ ಎಂದರು.

ಕಾಂಗ್ರೆಸ್‌ನವರು ಬಾಗೇಪಲ್ಲಿಯನ್ನು ಕೈ ಬಿಟ್ಟಿದ್ದರು. ನಮ್ಮ ಸರ್ಕಾರ ಬದ್ಧತೆಯಿಂದ ಅನುದಾನ ಕೊಟ್ಟಿದೆ. ಹಾಗಾಗಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಅಧಿಕೃತವಾಗಿ ಸರ್ಕಾರದಿಂದಲೇ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT