ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

ಚಿಂತಾಮಣಿ ನಗರದಲ್ಲಿ ನಿತ್ಯ ಒಂದಲ್ಲ ಒಂದು ಬಡಾವಣೆಯಲ್ಲಿ ನಾಗರಿಕರ ಪ್ರತಿಭಟನೆ
Last Updated 22 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿಯಲ್ಲಿ ಕುಡಿಯುವ ನೀರಿಗೆ ಹಿಂದೆಂದೂ ಕಾಣದಂತಹ ಭೀಕರ ಪರಿಸ್ಥಿತಿ ಎದುರಾಗಿದೆ.

ತಿಂಗಳಿಗೊಮ್ಮೆ ಸಹ ನೀರು ಪೂರೈಕೆಯಾಗುತ್ತಿಲ್ಲ. ನಾಗರಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಪೂರೈಕೆಯಲ್ಲಿನ ಅವ್ಯವಸ್ಥೆ ಭೀಕರತೆಗೆ ಕಾರಣವಾಗಿದೆ ಎಂದು ಎಂಬುದು ನಾಗರಿಕರ ಆರೋಪವಾಗಿದೆ.

ನಗರಕ್ಕೆ ಕುಡಿಯುವ ನೀರನ್ನು ಪೂರೈಸುತ್ತಿದ್ದ ಪ್ರಮುಖ ನೈಸರ್ಗಿಕ ಮೂಲ ಕನಂಪಲ್ಲಿ ಕೆರೆ ಬರಿದಾಗಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಹಗಲು-ರಾತ್ರಿ ನೀರಿನ ಟ್ಯಾಂಕರ್‌ಗಳ ಭರಾಟೆ ಜೋರಾಗುತ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ಬಡಾವಣೆಯ ಜನರು ನಗರಸಭೆಯ ವಿರುದ್ಧ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮಾರ್ಚ್‌ ಮೂರನೇ ವಾರದಲ್ಲೇ ಪರಿಸ್ಥಿತಿ ಬಿಗಡಾಯಿಸಿದರೆ ಏಪ್ರಿಲ್-ಮೇ ತಿಂಗಳುಗಳಲ್ಲಿ ಇನ್ನೆಷ್ಟು ನೀರಿನ ಸಮಸ್ಯೆ ಉಂಟಾಗಲಿದೆ ಎಂದು ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ 4 ವರ್ಷಗಳಿಂದ ಸತತ ಬರಗಾಲ, ಕೆರೆಕುಂಟೆಗಳು ಒಣಗಿ ಬಿರುಕು ಬಿಟ್ಟಿವೆ. ಅಂತರ್ಜಲಮಟ್ಟತೀವ್ರವಾಗಿ ಕುಸಿದಿದೆ. ಕೊಳವೆಬಾವಿಗಳು ಬತ್ತಿಹೋಗಿವೆ.

ಕಳೆದ 5-6 ವರಷಗಳಿಂದ ನಗರಕ್ಕೆ ನೀರನ್ನು ಪೂರೈಸಲು ಯಾವುದೇ ಯೋಜನೆಯನ್ನು ರೂಪಿಸದೆ ಕೊಳವೆ ಬಾವಿಗಳ ನೀರನ್ನು ಆಶ್ರಯಿಸಿದ್ದು ಹಾಗೂ ಸರಬರಾಜು ಮಾಡುವಲ್ಲಿನ ಅವ್ಯವಸ್ಥೆಯಿಂದ ಸಮಸ್ಯೆ ಬಿಗಡಾಯಿಸಿದೆ. ಭಕ್ತರಹಳ್ಳಿ ಕೆರೆಯಿಂದ ನೀರು ತರುವ ಯೋಜನೆ ರೂಪಿಸಿ 6-7 ವರ್ಷಗಳಾದರೂ ಅನುಷ್ಠಾನಗೊಳ್ಳಲಿಲ್ಲ. ಕೇವಲ ರಾಜಕಾರಣಿಗಳ ಪ್ರಚಾರ ಮತ್ತು ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ನಾಗರಿಕರ ಕೊರಗಾಗಿದೆ.

ನಗರದಲ್ಲಿ ಸುಮಾರು 76ಸಾವಿರ ಜನಸಂಖ್ಯೆ ಇದೆ. ಪ್ರತಿನಿತ್ಯ ನಗರಕ್ಕೆ ಬಂದು ಹೋಗುವವರು ಸೇರಿ 80 ಸಾವಿರ ಜನರಿಗೆ ಪ್ರತಿನಿತ್ಯ 10.26 ಲಕ್ಷ ಗ್ಯಾಲನ್ ನೀರು ಬೇಕಾಗಿದೆ. ಕನಂಪಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದೆ. ಕೊಳವೆ ಬಾವಿಗಳಿಂದ ಪ್ರತಿನಿತ್ಯ 2.10 ಲಕ್ಷ ಗ್ಯಾಲನ್ ನೀರು ದೊರೆಯುತ್ತಿದೆ. 8.16 ಲಕ್ಷ ಗ್ಯಾಲನ್ ನೀರು ಕೊರತೆ ಇದೆ ಎಂದು
ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ನೀರು ಸರಬರಾಜಿಗಾಗಿ 156 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ 124 ಬಾವಿಗಳು ಬತ್ತಿಹೋಗಿವೆ. ಕೇವಲ 32 ಕೊಳವೆಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಎಸ್.ಎಫ್.ಸಿ ಯೋಜನೆಯಲ್ಲಿ 4 ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ 3 ಕೊಳವೆ ಬಾವಿಗಳ ಆಳ ಹೆಚ್ಚಿಸಲು ಮಂಜೂರಾತಿ ದೊರೆತಿದೆ. ಕೆರೆಯಿಂದ ನೀರು ಪೂರೈಕೆಯಾಗುತ್ತಿದ್ದ 4,5.6.7,8 ನೇ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ದಿನಕ್ಕೆ 80-90 ಟ್ಯಾಂಕರ್ ಲೋಡ್ ನೀರನ್ನು ಕೊಂಡುಕೊಳ್ಳಲಾಗುತ್ತಿದೆ ಎನ್ನುತ್ತಾರೆ ನೀರು ಸರಬರಾಜು ವಿಭಾಗದ ಅಧಿಕಾರಿಗಳು.

ನಗರದಲ್ಲಿ ಹಿಂದೆಂದೂ ಇಂತಹ ಭೀಕರ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಕೆರೆಯಲ್ಲಿ ನೀರು ಮುಗಿಯುವುದು ಗೊತ್ತಿದ್ದರೂ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಜನತೆ ಪರಿತಪಿಸುವಂತಾಗಿದೆ.

ನೀರು ಪೂರೈಕೆಯಲ್ಲಿನ ಅವ್ಯವಹಾರಗಳು ಪರಿಸ್ಥಿತಿ ಉಲ್ಬಣಗೊಳ್ಳಲು ಕಾರಣವಾಗಿದೆ. ಇರುವ ನೀರನ್ನು ಸಮರ್ಪಕವಾಗಿವಿತರಿಸಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ. ನೀರು ಬಿಡುವ ನೀರುಗಂಟಿಗಳ (ವಾಲ್ವ್‌ಮೆನ್‌) ಕೈವಾಡ ಅತಿಯಾಗಿದೆ. ಅಧಿಕಾರಿಗಳಿಗೆ ಅವರ ಮೇಲೆ ಹಿಡಿತವೇ ಇಲ್ಲ ಎಂದು ನಾಗರಿಕರು ದೂರುತ್ತಾರೆ.

ನಗರದಲ್ಲಿ ಒಂದೊಂದು ಕಡೆ ಒಂದೊಂದು ಪರಿಸ್ಥಿತಿ ಇದೆ. ಕೆಲವು ವಾರ್ಡ್ಗಳಲ್ಲಿ 15 ದಿನಗಳಿಗೆ, ಕೆಲವು ವಾರ್ಡ್ಗಳಲ್ಲಿ 20 ದಿನಗಳಿಗೆ, ಕೆಲವು ಕಡೆ ತಿಂಗಳಿಗೊಮ್ಮೆ ನೀರು ಬಿಡುತ್ತಾರೆ. ಸಿಕ್ಕಿದವರಿಗೆ ಸೀರುಂಡೆ ಎನ್ನುವಂತೆ ಕೆಲವು ಮನೆಗಳಿಗೆ ಬರುತ್ತದೆ. ಉಳಿದವರಿಗೆ ತೊಟ್ಟಿಕ್ಕುವುದಿಲ್ಲ.

5-6 ವರ್ಷಗಳ ಹಿಂದೆ ನೀರು ಪೂರೈಕೆಯಲ್ಲಿ ಇಡೀ ಜಿಲ್ಲೆಯಲ್ಲಿ ಚಿಂತಾಮಣಿ ಪ್ರಥಮ ಸ್ಥಾನದಲ್ಲಿತ್ತು, ಈಗ ಚಿಂತಾಮಣಿ ಕೊನೆಯ ಸ್ಥಾನದಲ್ಲಿದೆ. ಚುನಾಯಿತ ಆಡಳಿತ ಮಂಡಳಿಯೂ ಇಲ್ಲದೆ ಅಧಿಕಾರಿಗಳಿಗೆ ಅಂಕುಶ ಹಾಕುವವರೇ ಇಲ್ಲವಾಗಿದೆ ಎಂಬುದು ಸಾರ್ವತ್ರಿಕ ಆರೋಪವಾಗಿದೆ.

‘ಅಧಿಕಾರಿಗಳು ನೀಡುವ ಅಂಕಿಅಂಶಗಳು ವಾಸ್ತವಕ್ಕೆ ದೂರ, ಮಳೆಯ ಅಭಾವದಿಂದ ನೀರಿನ ಕೊರತೆ ಎಂದು ಸಿದ್ಧ ಉತ್ತರ ನೀಡುತ್ತಾರೆ. ಪ್ರತಿನಿತ್ಯ 80-90 ಟ್ಯಾಂಕರ್ ಲೋಡ್ ನೀರನ್ನು ಪಡೆಯುತ್ತಿದ್ದಾರೆ. ಒಂದು ಟ್ಯಾಂಕರ್‌ಗೆ ₹785 ಹಣ ನೀಡಲಾಗುತ್ತಿದೆ. ಜತೆಗೆ ಖಾಸಗಿ ಕೊಳವೆ ಬಾವಿಗಳಿಗೆ ತಿಂಗಳಿಗೆ ₹18 ಸಾವಿರ ನೀಡಿ ನೀರು ಪಡೆಯುತ್ತಿದ್ದೇವೆ ಎನ್ನುತ್ತಾರೆ. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಪೂರೈಸಿದರೆ ಈಗಲೂ ವಾರಕ್ಕೊಮ್ಮೆ ನೀರು ಪೂರೈಸಬಹುದು. ಅಧಿಕಾರಿಗಳ ಆಡಳಿತ ವೈಫಲ್ಯವೇ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಸದಸ್ಯ ಶಫೀಕ್ ಅಹ್ಮದ್.

ಅಂಕಿಅಂಶಗಳು:

76,068ನಗರದ ಜನಸಂಖ್ಯೆ

10.26 ಲಕ್ಷ ಲೀಟರ್ಪ್ರತಿನಿತ್ಯ ನೀರಿನ ಬೇಡಿಕೆ

2.10 ಲಕ್ಷ ಲೀಟರ್ಸದ್ಯ ನಿತ್ಯ ಲಭ್ಯವಾಗುತ್ತಿರುವ ನೀರು

8.16 ಲಕ್ಷ ಲೀಟರ್ನಿತ್ಯದ ನೀರಿನ ಕೊರತೆ ಪ್ರಮಾಣ

156ನಗರದಲ್ಲಿರುವ ಕೊಳವೆ ಬಾವಿಗಳು

32ಕಾರ್ಯನಿರ್ವಹಿಸುತ್ತಿರುವ ಕೊಳವೆ ಬಾವಿಗಳು

124ಬತ್ತಿದ ಕೊಳವೆಬಾವಿಗಳು

4ಬಾಡಿಗೆ ಪಡೆದ ಖಾಸಗಿ ಕೊಳವೆಬಾವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT