ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಪುನರುಜ್ಜೀವನಕ್ಕೆ ಧ್ವನಿ

ಸ್ವಲ್ಪ ಮಳೆ ಸುರಿದರೂ ತುಂಬುವ ಕೆರೆಗಳು; ತಿಂಗಳಲ್ಲಿ ನೀರಿನ ಮಟ್ಟ ಇಳಿಕೆ
Last Updated 4 ಆಗಸ್ಟ್ 2022, 5:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆ ಸುರಿಯುತ್ತಿದೆ.ಭೂಜಲ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಅಂತರ್ಜಲ ಮಟ್ಟ ಹೆಚ್ಚಿದೆ. ಈ ಬೆಳವಣಿಗೆಗಳ ನಡುವೆಯೇ ಜಿಲ್ಲೆಯಲ್ಲಿನ ಕೆರೆ, ಕಟ್ಟೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಬೇಕು. ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡಬೇಕು. ಹೆಚ್ಚು ಕಾಲ ನೀರು ಸಂಗ್ರಹವಾಗುವಂತೆ ಕ್ರಮವಹಿಸಬೇಕು ಎನ್ನುವ ಧ್ವನಿ ಪರಿಸರವಾದಿಗಳು, ನೀರಾವರಿ ಹೋರಾಟಗಾರರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 169, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1,332 ಕೆರೆಗಳಿವೆ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆ ಆಗುತ್ತಿರುವ ಕಾರಣ ಬಹಳಷ್ಟು ಕೆರೆಗಳಲ್ಲಿ ನೀರು ತುಂಬಿದೆ. ಕೆಲವು ಕೆರೆಗಳಲ್ಲಿ ಅರೆ ಬರೆಯಾಗಿ ನೀರಿದೆ. ಕೆರೆಗಳಲ್ಲಿ ನೀರು ತುಂಬಿರುವುದನ್ನು ನೋಡಿ ರೈತರು ಸಹಜವಾಗಿ ಸಂತಸಗೊಳ್ಳುವರು.ಆದರೆ ಈ ನೀರು ತಿಂಗಳಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಿದೆ.

ಕಳೆದ ಮೂರು ದಶಕಗಳಲ್ಲಿಯೇ ಸುರಿದಷ್ಟು ಮಳೆ ಕಳೆದ ವರ್ಷ ಜಿಲ್ಲೆಯಲ್ಲಿ ಸುರಿಯಿತು. ಜಿಲ್ಲೆಯ ಶೇ 90ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದವು. ಆದರೆ ಹೀಗೆ ಕೋಡಿ ಬಿದ್ದ ಕೆರೆಗಳಲ್ಲಿ ಮಳೆ ನಿಂತು ತಿಂಗಳಲ್ಲಿ ಅರ್ಧ ನೀರೇ ಖಾಲಿ ಆಗಿತ್ತು. ಕೆರೆಗಳಲ್ಲಿ ತುಂಬಿರುವ ಹೂಳಿನ ಕಾರಣದಿಂದ ನೀರು ಹೆಚ್ಚು ಸಂಗ್ರಹವಾಗುತ್ತಿಲ್ಲ. ಸ್ವಲ್ಪ ಬಿರುಸು ಮಳೆ ಸುರಿದರೂ ಕೆಲವು ಕೆರೆಗಳು ತುಂಬುತ್ತಿವೆ. ನಂತರ ಸ್ವಲ್ಪ ದಿನಕ್ಕೆ ನೀರು ಕಡಿಮೆ ಆಗುತ್ತದೆ.

ಕೆರೆಗಳಿಗೆ ವೈಜ್ಞಾನಿಕವಾಗಿ ಕಾಯಕಲ್ಪ ನೀಡಿದರೆ ಜಿಲ್ಲೆಯಲ್ಲಿ ಬರವನ್ನು ನೀಗಿಸಬಹುದು ಎಂದು ನೀರಾವರಿ ಹೋರಾಟಗಾರರು ನುಡಿಯುವರು.

ಮೈಕ್ರೊ ವಾಟರ್ ಬಜೆಟ್ ರೂಪಿಸಿ:ಜಿಲ್ಲೆಯಲ್ಲಿ ಒಟ್ಟು 3,800 ಚದುರ ಕಿ.ಮೀ ಭೂ ಪ್ರದೇಶವಿದೆ. ಪ್ರತಿ ವರ್ಷ ಸರಾಸರಿ 130 ಟಿಎಂಸಿ ಅಡಿ ಮಳೆ ನೀರು ದೊರೆಯುತ್ತದೆ. ಕೆರೆಗಳಲ್ಲಿ ಎರಡು ಮೀಟರ್ ಹೂಳು ತೆಗೆದರೆ 50 ಟಿಎಂಸಿ ಅಡಿ ನೀರನ್ನು ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ನೀರಾವರಿ ಹೋರಾಟಗಾರ ಹಾಗೂ ಪರಿಸರವಾದಿ ಚೌಡಪ್ಪ.

ಜಿಲ್ಲೆಯ ಪಾಪಾಗ್ನಿ, ಉತ್ತರಪಿನಾಕಿನಿ ಮತ್ತು ಚಿತ್ರಾವತಿ ನದಿಯ ನೀರು ಆಂಧ್ರಕ್ಕೆ ಹರಿದು ಹೋಗುತ್ತದೆ. ಪಂಚಾಯಿತಿವಾರು ಮೈಕ್ರೊ ವಾಟರ್ ಬಜೆಟ್‌ ರೂಪಿಸಿಕೊಂಡು ಕೆರೆಗಳ ಅಭಿವೃದ್ಧಿಗೊಳಿಸಬೇಕು. ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿನದಾಗಿ ಬಳಸಿದ್ದೇವೆ. ಅಂತರ್ಜಲ ಬರಿದಾಗಿದೆ. ಈಗ ಮೇಲ್ನೊಟಕ್ಕೆ ಅಂತರ್ಜಲ ಹೆಚ್ಚಿದೆ ಎನಿಸುತ್ತದೆ. ಆದರೆ ಅದು ದೀರ್ಘಕಾಲದವರೆಗೂ ಇರುವುದಿಲ್ಲ. ಕೆರೆಗಳ ಪುನರುಜ್ಜೀವನದಿಂದ ಮಾತ್ರ ಅಂತರ್ಜಲ ಅಭಿವೃದ್ಧಿ ಸಾಧ್ಯ. ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಬೇಕು
ಎಂದರು.

ಪೂರ್ಣವಾಗದ ಕೆರೆ ಸರ್ವೆ:ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 374 ಕೆರೆಗಳು ಒತ್ತುವರಿ ಆಗಿವೆ ಎಂದು ಗುರುತಿಸಲಾಗಿದೆ. ಹೀಗೆ ಒತ್ತುವರಿ ಆಗಿರುವ 374 ಕೆರೆಗಳ ಒಟ್ಟು ವಿಸ್ತೀರ್ಣ 1,126 ಹೆಕ್ಟೇರ್ ಇದೆ. ಅಲ್ಲದೆ ಇಂದಿಗೂ 700ಕ್ಕೂ ಹೆಚ್ಚು ಕೆರೆಗಳ ಸರ್ವೆಯೇ ಆಗಿಲ್ಲ. ಇದರಿಂದ ಒತ್ತುವರಿ ತೆರವು ಮತ್ತು ಅಭಿವೃದ್ಧಿಗೂ ಹಿನ್ನಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT