ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚಲಾಗುವ ಸಚಿವ ಡಾ.ಕೆ. ಸುಧಾಕರ್ ಸ್ವಕ್ಷೇತ್ರದ ಜಿಲ್ಲಾಸ್ಪತ್ರೆ ನೆಲಮಹಡಿ!

ಜಿಲ್ಲಾ ಆಸ್ಪತ್ರೆಗೆ ಅನಾರೋಗ್ಯ
Last Updated 22 ಅಕ್ಟೋಬರ್ 2021, 3:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಡಿಗಡಿಗೂ ಪಾಚಿ, ಎದ್ದು ಕಾಣುವ ಮಳೆ ನೀರಿನ ರಾಡಿ, ಕೊಠಡಿಗಳ ಬಳಿ ನೀರು ನಿಂತಿರುವುದು, ಫಿಲ್ಲರ್‌ಗಳಲ್ಲಿ ಒಸರುವ ನೀರು, ಬಚ್ಚಲು ಮನೆಯ ರೀತಿ ಕಾಣುವ ವಾತಾವರಣ.

ಇದು ಜಿಲ್ಲಾ ಆಸ್ಪತ್ರೆಯ ನೆಲಮಹಡಿಯಲ್ಲಿ ಕಂಡು ಬರುವ ಚಿತ್ರಣ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಪ್ರತಿನಿಧಿಸುವ ಕ್ಷೇತ್ರದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಇಂತಹ ಅವ್ಯವಸ್ಥೆಗಳ ದರ್ಶನ ಕಣ್ಣಿಗೆ ರಾಚುತ್ತದೆ. ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ನೆಲ ಮಹಡಿಯನ್ನು ಮಳೆಗಾಲದಲ್ಲಿ ಒಮ್ಮೆ ನೋಡಿದರೆ ಇದೇನು ಕೆರೆಯೋ ಎನಿಸುತ್ತದೆ. ಮಳೆಗಾಲದಲ್ಲಿ ನೆಲಮಹಡಿಯಲ್ಲಿ ಹೇರಳವಾಗಿ ನೀರು ತುಂಬುತ್ತಿರುವ ಪರಿಣಾಮ ಇಡೀ ಕಟ್ಟಡದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾಲ್ಕು ಎಕರೆ ಪ್ರದೇಶದಲ್ಲಿ ₹ 23.35 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದೆ. ಆಸ್ಪತ್ರೆ ನಿರ್ಮಿಸಿ ಹತ್ತಾರು ವರ್ಷಗಳೇನೂ ಆಗಿಲ್ಲ. ಆರೇಳು ವರ್ಷಗಳಾಗಿದೆ ಅಷ್ಟೇ. ಆಸ್ಪತ್ರೆ ನಿರ್ಮಾಣವಾಗಿರುವ ಸ್ಥಳ ಈ ಹಿಂದೆ ತಿಮ್ಮೇಗೌಡನ ಕೆರೆ ಆಗಿತ್ತು. ಕೆರೆಯನ್ನು ಮುಚ್ಚಿ ಆಸ್ಪತ್ರೆಯನ್ನು ನಿರ್ಮಿಸಲಾಯಿತು.ಕೆರೆಯಲ್ಲಿ ನಿರ್ಮಿಸಿರುವುದು ನೀರು ಒಸರಲು ಒಂದು ಕಾರಣವಾದರೆ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ನೆಲಮಹಡಿ ಬಚ್ಚಲು ಮನೆಯಂತೆ ಆಗುತ್ತದೆ.

ಜೋರಾಗಿ ಮಳೆ ಸುರಿದ ವೇಳೆ ಜಿಲ್ಲಾ ಆಸ್ಪತ್ರೆ ಕಟ್ಟಡದ ನೆಲ ಮಾಳಿಗೆಯಲ್ಲಿ ಮಳೆ ನೀರು ಮಡುಗಟ್ಟಿ ಸಣ್ಣ ಕೆರೆ ನಿರ್ಮಾಣವಾಗುತ್ತದೆ. 2017ರ ಸೆಪ್ಟೆಂಬರ್‌ನಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ‘ಆಸ್ಪತ್ರೆ ಕಟ್ಟಡ ನಿರ್ಮಿಸಿದ ಸ್ಥಳದಲ್ಲಿ ಈ ಹಿಂದೆ ಕೆರೆ ಪ್ರದೇಶವಾಗಿತ್ತು. ನೀರು ನಿಲ್ಲದಂತೆ ಏನು ಮಾಡಬಹುದು ಎನ್ನುವ ಬಗ್ಗೆ ಎಂಜಿನಿಯರ್‌ಗಳ ಜತೆ ಚರ್ಚಿಸುತ್ತೇನೆ’ ಎಂದಿದ್ದರು.

ಅಂದಿನಿಂದ ಇಂದಿನವರೆಗೂ ಈ ಅಧ್ವಾನ ತಡೆಗೆ ಶಾಶ್ವತ ಪರಿಹಾರಗಳು ಆಗಿಲ್ಲ. ಯಾವುದೇ ಕಟ್ಟಡ ನಿರ್ಮಿಸಬೇಕಾದರೂ ಎಂಜಿನಿಯರ್‌ಗಳು ವೈಜ್ಞಾನಿಕವಾಗಿ, ಲೆಕ್ಕ ಹಾಕಿಯೇ ನಿರ್ಮಾಣ ಮಾಡುತ್ತಾರೆ. ಹೀಗಿದ್ದೂ ನೆಲಮಹಡಿಯಲ್ಲಿ ನೀರು ಏಕೆ ನಿಲ್ಲುತ್ತಿದೆ. ಈ ಬೇಜವಾಬ್ದಾರಿ ಕೆಲಸಕ್ಕೆ ಯಾರು ಹೊಣೆ. ಮಳೆಯಿಂದ ಕಟ್ಟಡ ಅಂದವನ್ನು ಕಳೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಫಿಲ್ಲರ್‌ಗಳಲ್ಲಿ ಮಳೆಯ ನೀರು ಒಸರುತ್ತಿದೆ. ಇದರಿಂದ ಫಿಲ್ಲರ್‌ಗಳೇ ಪಾಚಿಗಟ್ಟಿವೆ. ಕಟ್ಟಡದ ಹೊರಭಾಗವನ್ನು ನೋಡಿದರೆ ಮಳೆ ನೀರು ಕಟ್ಟಡಕ್ಕೆ ಇಳಿದಿರುವುದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT