ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸರಬರಾಜು; ಅಧಿಕಾರಿಗಳು ವಿಫಲ

ಚಿಂತಾಮಣಿ ನಗರಸಭೆ ಸದಸ್ಯ ಕೆ.ವಿ.ರೆಡ್ಡಪ್ಪ ಅಸಮಾಧಾನ
Last Updated 8 ಜುಲೈ 2020, 9:00 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಸಭೆ ಪೌರಾಯುಕ್ತರಿಗೆ ನಗರದ ನಾಗರಿಕರ ಬಗ್ಗೆ ಕಾಳಜಿ ಇಲ್ಲ. ನಗರದ ಬಗ್ಗೆ ಚಿಂತನೆ, ಕನಿಷ್ಠ ಜ್ಞಾನ ಇಲ್ಲ. ಜನರ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿಲ್ಲ. ನಾಗರಿಕರಿಗೆ ನೀರು ಪೂರೈಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ನಗರಸಭೆ ಸದಸ್ಯ ಕೆ.ವಿ.ರೆಡ್ಡಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆಯ ಒಂದು ಗುಂಪಿನ 14 ಜನ ಸದಸ್ಯರು ಒಟ್ಟಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಾಗರಿಕರಿಗೆ ಪ್ರಶ್ನೆ ಕೇಳುವ ಹಕ್ಕಿದೆ. ನೀರು ಬೇಕು ಎಂದು ಕೇಳಿದರೆ ದೌರ್ಜನ್ಯ ನಡೆಸಿದರು ಎಂದು ಮೊಕದ್ದಮೆ ಹೂಡುತ್ತಾರೆ. ನಗರಸಭೆ ಸದಸ್ಯರು 20 ಬಾರಿ ದೂರವಾಣಿ ಮಾಡಿದರೂ ಸ್ಪಂದಿಸುತ್ತಿಲ್ಲ. ನಗರದಲ್ಲಿ ಎಷ್ಟು ಜನಸಂಖ್ಯೆ ಇದೆ. ಎಷ್ಟು ನೀರು ಅಗತ್ಯವಿದೆ. ಲಭ್ಯತೆ ಮತ್ತು ಕೊರತೆ ಎಷ್ಟು? ಎಂಬ ಬಗ್ಗೆ ಮಾಹಿತಿ ಇಲ್ಲ. ನೀರಿಗಾಗಿ ನಾಗರಿಕರು ಕಳೆದ 5-6 ತಿಂಗಳುಗಳಿಂದ ಪರದಾಡುತ್ತಿದ್ದರೂ ಯಾವುದೇ ಕ್ರಿಯಾಯೋಜನೆ ತಯಾರಿಸಿಲ್ಲ ಎಂದು ದೂರಿದರು.

19ನೇ ವಾರ್ಡ್ ಸದಸ್ಯ ಜಗದೀಶ್ ಮಾತನಾಡಿ, ಪ್ರತಿಭಟನೆ ಮಾಡುತ್ತಿರುವ ಕೆಲವು ಸದಸ್ಯರಿಗೆ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ ಎಂದು ಜೆಡಿಎಸ್ ಸದಸ್ಯರ ಆರೋಪ ಸುಳ್ಳು. ನಮ್ಮಲ್ಲಿ ಯಾರಿಗೂ ನೋಟೀಸ್ ನೀಡಿಲ್ಲ. ಅಕ್ರಮವಿದ್ದರೆ ಕಾನೂನಿನಂತೆ ಕ್ರಮಕೈಗೊಳ್ಳಲಿ. ನೀರಿಗಾಗಿ ಕಾನೂನು ಬದ್ಧವಾಗಿ ಹೋರಾಟ ಮಾಡಿದರೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ.ವೈಯಕ್ತಿಕ ವಿಚಾರಗಳನ್ನು ತ್ಯಜಿಸಿ ನಾವು ಅಭಿವೃದ್ಧಿಗೆ ಆದ್ಯತೆ ನೀಡಿ ಅಧಿಕಾರಿಗಳ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದೇವೆ
ಎಂದರು.

ಸದಸ್ಯ ಹರೀಶ್ ಮಾತನಾಡಿ, ನಗರದಲ್ಲಿ 8-10 ದಿನಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಶಾಸಕರು ಹೇಳುತ್ತಾರೆ.
ಅವರ ಪಕ್ಷದ ಸದಸ್ಯರು 18-20 ದಿನಗಳಿಗೆ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ 7-8 ತಿಂಗಳುಗಳಿಂದಲೂ ನೀರಿನ ವಿಚಾರವಾಗಿ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದಿಂದಲೇ ₹785 ನೀಡುತ್ತಿದ್ದ ಟ್ಯಾಂಕರ್ ನೀರಿನ ಬೆಲೆ ₹510ಕ್ಕೆ ಇಳಿದಿದೆ. ಕೃಷಿ ಹೊಂಡದಿಂದ ಕಳಪೆ, ಪಾಚಿ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು.

ಸದಸ್ಯೆ ಕೆ.ರಾಣಿಯಮ್ಮ ಮಾತನಾಡಿ, ‘ನಗರದ ಎಲ್ಲ ವಾರ್ಡ್‌ಗಳಿಗೂ ನೀರು ಕೇಳಲಾಗಿದೆ. ಶಾಂತಿನಗರದಲ್ಲಿ ಯುಜಿಡಿಗಾಗಿ ಅರ್ಜಿ ನೀಡಿ 3 ವರ್ಷವಾಗಿದೆ. ಹಲವಾರು ಬಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರತಿಬಾರಿಯೂ ನೆಪಗಳನ್ನು ಹೇಳುತ್ತಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT