ಮಂಗಳವಾರ, ನವೆಂಬರ್ 24, 2020
25 °C
ದಸರಾ ಹಬ್ಬ

ಚಿಕ್ಕಬಳ್ಳಾಪುರ: ಖರೀದಿ ಭರಾಟೆ, ಗಗನಕುಸುಮವಾದ ಹೂವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೋವಿಡ್‌ ಭೀತಿಯ ನಡುವೆಯೂ ನಗರದ ಮಾರುಕಟ್ಟೆಗಳಲ್ಲಿ ಶನಿವಾರ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ವಸ್ತುಗಳ ಖರೀದಿ ಭರಾಟೆ ಕಂಡು­ಬಂತು. ಆದರೆ, ಪ್ರತಿ ಹಬ್ಬದಂತೆ ದಸರಾ ಹಬ್ಬಕ್ಕೂ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ಬಜಾರ್ ರಸ್ತೆ, ಎಂ.ಜಿ ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ಹಬ್ಬದ ವ್ಯಾಪಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತು. ಜನರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ, ಬೂದು ಕುಂಬಳಕಾಯಿ, ಬಾಳೆ ಕಂದುಗಳ ಖರೀದಿಯಲ್ಲಿ ತೊಡಗಿದ್ದರು.

ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತೆಂಗಿನಕಾಯಿ, ಬಾಳೆಕಂದು, ಮಾವಿನಸೊಪ್ಪು, ಸಿಹಿ ತಿನಿಸುಗಳ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪಾರಸ್ಥರು, ರಸ್ತೆಯಲ್ಲಿ ಸಾಗುತ್ತಿದ್ದ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಪೈಪೋಟಿ ನಡೆಸಿದ್ದರು.

ಗಗನಕುಸುಮವಾದ ಹೂವು: ಹಣ್ಣು ಮತ್ತು ತರ­ಕಾರಿ­ಗಳ ಬೆಲೆಗಳಿಗೆ ಹೋಲಿಕೆ ಮಾಡಿದರೆ ಹೂವು­ಗಳ ಬೆಲೆಗಳಲ್ಲಿ ಏಕಾಏಕಿ ಏರಿಕೆ ಕಾಣಿಸಿಕೊಂಡಿದೆ. ಆಯುಧ ಪೂಜೆ ದಿನ ವಾಹನ, ಯಂತ್ರೋಪಕರಣಗಳನ್ನು ಹೂವಿನಿಂದ ಅಲಂಕಾರ ಮಾಡುವುದರಿಂದಾಗಿ ಸದ್ಯ ಹೂವಿನ ಬೆಲೆ ಗಗನಕ್ಕೇರಿದೆ.

ಶನಿವಾರ ಮಾರುಕಟ್ಟೆಯಲ್ಲಿ ಕನಕಾಂಬರ ಮತ್ತು ಮಲ್ಲಿಗೆ ಹೂವುಗಳು ಒಂದು ಕೆ.ಜಿಗೆ ತಲಾ ₹ 1,600 ವರೆಗೆ ಮಾರಾಟವಾಗುತ್ತಿದ್ದವು. ಕಾಕಡ ₹ 800, ಶೇವಂತಿಗೆ ₹ 200, ರೋಜಾ ₹ 300ಕ್ಕೆ, ಬಟನ್ಸ್‌ ₹ 300 ಮಾರಾಟವಾಗುತ್ತಿದ್ದವು. ಹೂವಿನ ಹಾರಗಳ ಮಾರಾಟ ಕೂಡ ಜೋರಾಗಿ ಕಂಡುಬಂತು. ಒಂದು ಜತೆ (2) ಶೇವಂತಿಗೆ ಹೂವಿನ ಹಾರಗಳು ₹ 250– ₹ 5000 ಮಾರಾಟವಾಗುತ್ತಿದ್ದವು. ಬಟನ್ಸ್ ₹ 150 ಬಿಕರಿಯಾಗುತ್ತಿದ್ದವು. ರೋಜಾ 8 ಅಡಿ ಮಾಲೆ ₹ 650– ₹ 7,00ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಕೆ.ಜಿ ಪಚ್ಚ ಬಾಳೆಹಣ್ಣು ₹ 50, ಏಲಕ್ಕಿ ಬಾಳೆ ₹ 70, ಸೇಬು ₹ 120, ಒಂದು ಜತೆ ಅನಾನಸ್‌ ₹ 70, ದಾಳಿಂಬೆ ₹ 120, ಮೂಸಂಬಿ ₹ 60 ಮಾರಾಟವಾಗುತ್ತಿದ್ದರೆ, ಬಾಳೆಕಂದು ಜೋಡಿಗೆ ₹ 40ವರೆಗೂ ಮಾರಾಟವಾಗುತ್ತಿದ್ದವು. ಇನ್ನು ಬೂದುಗುಂಬಳಕಾಯಿ ಕೆ.ಜಿಗೆ ₹ 30 ರ ವರೆಗೆ ಮಾರಾಟವಾಗುತ್ತಿದ್ದವು.

‘ಈ ಹಬ್ಬಕ್ಕೆ ವಾಹನಗಳಿಗೆ ಅಲಂಕರಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಹೂವನ್ನು ಖರೀದಿಸುತ್ತಾರೆ. ಹೀಗಾಗಿ ಹೂವಿನ ಬೆಲೆ ಸ್ಪಲ್ಪ ದುಬಾರಿಯಾಗಿದೆ. ಬೆಲೆ ಏರಿಕೆಯಿಂದಾಗಿ ಜನರು ಹೂವು ಖರೀದಿ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದಾರೆ’ ಎಂದು ಹೂವಿನ ವ್ಯಾಪಾರಿ ಅಶ್ವತ್ಥಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು