ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೆರೆಯುವ ನಿರ್ಧಾರಕ್ಕೆ ಸ್ವಾಗತ

ದ್ವಿತೀಯ ಪಿಯು, ಎಸ್ಸೆಸ್ಸೆಲ್ಸಿ ತರಗತಿ: ವಿದ್ಯಾಗಮ ಯೋಜನೆಗೆ ಹೊಸರೂಪ
Last Updated 21 ಡಿಸೆಂಬರ್ 2020, 4:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೊಸ ವರ್ಷದಿಂದ ಶಾಲೆ–ಕಾಲೇಜುಗಳ ಬಾಗಿಲು ತೆರೆಯಲಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.

ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜನವರಿ 1ರಿಂದಲೇ ನಿಯಮಿತ ತರಗತಿಗಳನ್ನು ನಡೆಸುವುದಾಗಿ ಸರ್ಕಾರ ಶನಿವಾರ ಘೋಷಿಸಿದೆ. ಇದರ ಜೊತೆಗೆ 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಯೋಜನೆಯು ಜಾರಿಯಾಗಲಿದೆ.

ಶಾಲೆಗಳ ಆರಂಭಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಸಿದ್ಧತೆ ಆರಂಭಿಸಿದೆ. ಅಗತ್ಯವಾದ ಸ್ವಚ್ಛತಾ ಕಾರ್ಯಕ್ರಮಗಳ ಜೊತೆಗೆ ಪರಿಕರಗಳನ್ನೂ ಸಿದ್ಧವಾಗಿಟ್ಟುಕೊಳ್ಳುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಮಕ್ಕಳ ಸುರಕ್ಷತೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಶೈಕ್ಷಣಿಕ ಚಟುವಟಿಕೆ ಆರಂಭವನ್ನು ಶಿಕ್ಷಣ ವಲಯದ ಜೊತೆಗೆ ಸಾರ್ವಜನಿಕರು ಸ್ವಾಗತ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಬೇಕು ಎನ್ನುವುದು ಅವರ ಸಲಹೆಯಾಗಿದೆ.

‘ಸದ್ಯಕ್ಕೆ ಕೋವಿಡ್ ಭೀತಿ ಕಡಿಮೆ ಆಗಿದೆ. ಹೀಗಾಗಿ ಶಾಲೆಗಳನ್ನು ತೆರೆಯುವ ನಿರ್ಧಾರ ಸ್ವಾಗತಾರ್ಹ. ಆನ್‌ಲೈನ್‌ ತರಗತಿಗಳು ನಡೆದಿದ್ದರೂ ಅವು ಅಷ್ಟು ಪರಿಣಾಮಕಾರಿ ಆಗಿಲ್ಲ. ಇದರಿಂದಾಗಿ ಸಾಕಷ್ಟು ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಶಾಲೆ–ಕಾಲೇಜುಗಳಲ್ಲಿಯೇ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸುವುದು ಒಳಿತು’ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಅತಿಮುಖ್ಯ ಘಟ್ಟ. ಹೀಗಾಗಿ ಈ ತರಗತಿಗಳನ್ನು ಮೊದಲಿಗೆ ಆರಂಭಿಸುತ್ತಿರುವುದು ಉತ್ತಮ ನಿರ್ಧಾರ. ಹಾಗೆಯೇ ಸಿಲಬಸ್ ಅನ್ನೂ ಉಳಿದ ಅವಧಿಗೆ ತಕ್ಕಂತೆ ಪರಿಷ್ಕರಣೆ ಮಾಡಬೇಕು’ ಎಂಬುದು ಶಿಕ್ಷಣ ತಜ್ಞರ ಸಲಹೆಯಾಗಿದೆ.

ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವರ್ಷದ ಶುಲ್ಕದಲ್ಲಿ ಅರ್ಧದಷ್ಟು ವಿನಾಯಿತಿ ನೀಡಬೇಕು. ಈ ಬಗ್ಗೆ ಸರ್ಕಾರವೇ ಗಮನ ಹರಿಸಿ ಶುಲ್ಕ ಪರಿಷ್ಕರಣೆ ಮಾಡಬೇಕು. ಹೆಚ್ಚಿನ ಶುಲ್ಕಕ್ಕೆ ಪೋಷಕರನ್ನು ಒತ್ತಾಯಿಸದಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಬೇಕು ಎಂಬುದು ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT