ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಸೇದು ಬಾವಿ ಹೇಳುತೈತೆ ನೀರಿನ ಕಥೆ

ಸಾಂಪ್ರದಾಯಿಕ ಮೂಲಕ್ಕಿಲ್ಲ ಕಾಯಕಲ್ಪ: ನಿರ್ವಹಣೆಗೆ ಗ್ರಾಮೀಣರ ಹಿಂಜರಿಕೆ
Last Updated 4 ಡಿಸೆಂಬರ್ 2022, 7:16 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಐದಾರು ದಶಕಗಳ ಹಿಂದೆ ಸಾಂಪ್ರದಾಯಿಕ ನೀರಿನ ಮೂಲವಾದ ಸೇದು ಬಾವಿಗಳೇ ಗ್ರಾಮೀಣರಿಗೆ ಕುಡಿಯುವ ನೀರಿಗೆ ಆಧಾರವಾಗಿದ್ದವು. ಇವುಗಳ ಬಳಿಯೇ ಅವರ ಬದುಕು ಅರಳಿತ್ತು.ಇಂದಿಗೂಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೇದು ಬಾವಿಗಳಿವೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಕೊಳಚೆ ನೀರಿನ ಸಂಗ್ರಹಣಾ ತಾಣಗಳಾಗಿದ್ದು, ಸಂರಕ್ಷಣೆಗೆ ಎದುರು ನೋಡುತ್ತಿವೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸೇದು ಬಾವಿಯಿಂದ ನೀರು ಸೇದುಕೊಂಡು ಜನರು ದಿನನಿತ್ಯ ಬಳಕೆ ಮಾಡುತ್ತಿದ್ದರು. ಕಾಲ ಬದಲಾದಂತೆ ಹಾಗೂ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ಬಹುತೇಕ ಬಾವಿಗಳು ಬತ್ತಿ ಹೋಗಿದ್ದವು. ಮತ್ತೊಂದೆಡೆ ಕೈಪಂಪ್‌ ಮತ್ತು ಕೊಳವೆಬಾವಿ ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡಿದ್ದರಿಂದ ಜನರು ಇವುಗಳ ಬಳಕೆಯಿಂದ ದೂರ ಸರಿದರು. ಹಾಗಾಗಿ, ಕೆಲವೆಡೆ ಈ ಬಾವಿಗಳು ಸಂಪೂರ್ಣವಾಗಿ ನಾಶವಾಗಿದ್ದರೆ, ಅಳಿದುಳಿದಿರುವ ಬಾವಿಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ.

ಹಿಂದಿನ ಕಾಲದಲ್ಲಿ ಇಂತಹ ಬಾವಿಗಳನ್ನು ತೋಡಿ ಸುತ್ತಲೂ ಕಲ್ಲುಗಳ ಕಟ್ಟಡ ನಿರ್ಮಿಸುತ್ತಿದ್ದರು. ಶ್ರೀಮಂತರು, ಬಡವರು ಎಂಬ ಭೇದಭಾವ ಇಲ್ಲದೇ ಗ್ರಾಮಗಳಲ್ಲಿ ಬಳಸುತ್ತಿದ್ದರು. ಬಾವಿಯ ಕಟ್ಟೆ ಬಳಿ ಉದ್ದದ ಕಲ್ಲುಗಳನ್ನು ಇಟ್ಟು, ಮಧ್ಯದಲ್ಲಿ ರಾಟೆ ಹಾಕಿ ಬಿಂದಿಗೆಗೆ ಹಗ್ಗ ಕಟ್ಟಿ ನೀರು ಸೇದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶುದ್ಧ ನೀರು ಸಿಗುತ್ತಿದ್ದರಿಂದ ಗ್ರಾಮೀಣರ ಬದುಕು ಹಸನುಗೊಂಡಿತ್ತು. ಇನ್ನೊಂದೆಡೆ ಜಾನುವಾರುಗಳಿಗೂ ಕುಡಿಯುವ ನೀರಿಗೆ ಆಶ್ರಯವಾಗಿದ್ದವು.

ಗ್ರಾಮೀಣ ಬದುಕು ಯಾಂತ್ರೀಕರಣಗೊಂಡಂತೆ ಕೊಳವೆಬಾವಿಗಳು, ಕೈಪಂಪ್‌ಗಳು, ಪೈಪ್ ಲೈನ್ ವ್ಯವಸ್ಥೆ, ಸಾರ್ವಜನಿಕ ಕೊಳಾಯಿ ವ್ಯವಸ್ಥೆ ಅಸ್ತಿತ್ವ ಪಡೆದುಕೊಂಡಿತು. ಯಾಂತ್ರಿಕ ಸಾಧನಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಗ್ರಾಮದ ಮನೆ ಮನೆಗೂ ನಲ್ಲಿ ಸಂಪರ್ಕ ವ್ಯವಸ್ಥೆಯಿದೆ. ಹಾಗಾಗಿ, ಸೇದು ಬಾವಿಗಳ ಬಳಕೆ ಸ್ಥಗಿತಗೊಂಡಿದೆ. ಹಾಗಾಗಿ, ಬಹುತೇಕ ಬಾವಿಗಳಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ದುರ್ವಾಸನೆ ಬೀರುತ್ತಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಕೆರೆ, ಕುಂಟೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಚಿತ್ರಾವತಿ, ವಂಡಮಾನ್ ಅಣೆಕಟ್ಟೆಯಲ್ಲೂ ನೀರಿನ ಸಂಗ್ರಹವಿದೆ. ಇದರಿಂದ ಅಂತರ್ಜಲ ಮಟ್ಟವೂ ವೃದ್ಧಿಸಿದೆ. ಹಾಗಾಗಿ, ಸೇದು ಬಾವಿಗಳು ಜೀವಕಳೆ
ಪಡೆದಿವೆ.

ಪಟ್ಟಣದ ಪೊಲೀಸ್ ವಸತಿ ಗೃಹಗಳಲ್ಲಿ ಸೇದು ಬಾವಿ ಇದೆ. ಆದರೆ, ಸೂಕ್ತ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಗೂಳೂರು ರಸ್ತೆಯ ಎತ್ತರ ಪ್ರದೇಶಗಳಿಂದ ಹರಿದು ಬರುವ ಚರಂಡಿ ನೀರನ್ನು ಈ ಬಾವಿಗೆ ಹರಿಸಲಾಗಿದೆ. ಸುತ್ತಮುತ್ತಲಿನ ಜನರು ಕಸ ತಂದು ಸುರಿಯುವುದರಿಂದ ತ್ಯಾಜ್ಯ ಸಂಗ್ರಹಗೊಂಡಿದೆ. ಕಲ್ಲು ಬಂಡೆಗಳು ಅಥವಾ ಕಬ್ಬಿಣದ ಜಾಲರಿಗಳಿಂದ ಇದನ್ನು ಮುಚ್ಚಿಲ್ಲ. ಹಾಗಾಗಿ, ಅಪಾಯ ಆಹ್ವಾನಿಸುತ್ತಿದೆ.

‘ತಾಲ್ಲೂಕಿನ ಪೋತೇಪಲ್ಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ಸೇದು ಬಾವಿಗಳು ವಿನಾಶದ ಅಂಚಿಗೆ ತಲುಪಿವೆ. ಒಂದಾನೊಂದು ಕಾಲದಲ್ಲಿ ಕುಡಿಯುವ ನೀರಿನ ಮೂಲವಾಗಿದ್ದ ಇವುಗಳನ್ನು ಸಂರಕ್ಷಿಸುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು, ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಮರುಜೀವ ನೀಡಬೇಕಿದೆ’ ಎಂದು ಪೋತೇಪಲ್ಲಿ ಗ್ರಾಮದ ಮುಖಂಡ ಚಂಚಪ್ಪಗಾರಿ ಶಿವಪ್ಪ ಮನವಿ ಮಾಡಿದ್ದಾರೆ.

‘ಗ್ರಾಮಗಳಲ್ಲಿ ಇರುವ ಸೇದು ಬಾವಿಗಳನ್ನು ಸಂರಕ್ಷಣೆ ಮಾಡಬೇಕು. ಆಯಾ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆಯ ಜವಾಬ್ದಾರಿ ನೀಡಬೇಕು. ಇವುಗಳ ಮರು ಬಳಕೆಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಹೊಸ ಯೋಜನೆ ರೂಪಿಸಿ ಪುನರುಜ್ಜೀವನಗೊಳಿಸಬೇಕು’ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT