ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಆಂಧ್ರದೊಂದಿಗೆ ಶೀಘ್ರದಲ್ಲೇ ಮಾತುಕತೆ: ಸಚಿವ ಡಾ.ಕೆ.ಸುಧಾಕರ್

Last Updated 27 ಜುಲೈ 2020, 11:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಗೆ ಅಗತ್ಯವಾದ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ನೀರು ವಿನಿಮಯ ಯೋಜನೆ ಅಡಿ ನೆರೆಯ ಆಂಧ್ರಪ್ರದೇಶದಿಂದ ಜಿಲ್ಲೆಗೆ ನೀರು ತರುವ ನಿಟ್ಟಿನಲ್ಲಿ ಆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ರಾಜ್ಯ ಸರ್ಕಾರದ ಆಡಳಿತ ಒಂದು ವರ್ಷ ಪೂರೈಸಿದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಅವರ ‌‘ಸವಾಲುಗಳ ವರ್ಷ ಪರಿಹಾರ ಸ್ಪರ್ಶ’ ನೇರಪ್ರಸಾರಕಾರ್ಯಕ್ರಮದ ಭಾಗವಹಿಸಿ ಅವರು ಮಾತನಾಡಿದರು.

‘ಈಗಾಗಲೇ ನಮ್ಮ ಗಡಿಭಾಗದಲ್ಲಿರುವ ಆಂಧ್ರಪ್ರದೇಶದ ಲೇಪಾಕ್ಷಿವರೆಗೆ ನೀರು ಬಂದಿದೆ. ಅದರಲ್ಲಿ ಜಿಲ್ಲೆಗೆ ಸುಮಾರು 10 ರಿಂದ 12 ಟಿಎಂಸಿ ನೀರು ಹರಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಮಾತನಾಡಿರುವೆ. ಮುಂದಿನ ಒಂದು ತಿಂಗಳಲ್ಲಿ ಆಂಧ್ರದ ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ರೈತ ಬದುಕು ಸದಾ ಹಸನಾಗಿರಬೇಕು ಎಂಬುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಎಚ್‌.ಎನ್.ವ್ಯಾಲಿ ಯೋಜನೆ ಅಡಿ ಕೆರೆಗಳನ್ನು ತುಂಬುವ ಕೆಲಸ ಆರಂಭವಾಗಿದೆ. ಒಂದು ತಿಂಗಳಲ್ಲಿ ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಕಡೆಗೆ ಎಚ್‌.ಎನ್.ವ್ಯಾಲಿ ನೀರು ಹರಿಸಲಾಗುತ್ತದೆ’ ಎಂದರು.

‘ಕಂದವಾರ, ಅಮಾನಿ ಗೋಪಾಲಕೃಷ್ಣ ಮತ್ತು ಮುಸ್ಟೂರು ಕೆರೆಗಳ ಕಾಯಕಲ್ಪಕ್ಕೆ ಯೋಜನೆ ರೂಪಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಿದ್ದು, 157 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆಗಸ್ಟ್ 15 ರಂದು ಕೆಲ ಘಟಕಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿ 27 ಗ್ರಾಮಗಳ ಆಯ್ಕೆ ಮಾಡಿದ್ದು, ತಲಾ ₹1 ಕೋಟಿ ವೆಚ್ಚದಲ್ಲಿ ಮಾದರಿ ಗ್ರಾಮ ನಿರ್ಮಾಣ ಮಾಡಲಾಗುತ್ತದೆ. ನಗರಕ್ಕೆ ಅಗತ್ಯವಾದ ಮೂಲಸೌಕರ್ಯಗಳು, ಉದ್ಯಾನ, ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಗೆ ಬಂಡವಾಳ ತರುವ ಪ್ರಯತ್ನ ಮಾಡಲಾಗುತ್ತಿದ್ದು, ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತರಲಾಗುತ್ತದೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿರುವ ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ವಿಭಜನೆ ಮಾಡಲಾಗುತ್ತದೆ. ಈಗಾಗಲೇ ವೈದ್ಯಕೀಯ ಕಾಲೇಜು ಕಟ್ಟಡದ ಕಾಮಗಾರಿ ಆರಂಭಗೊಂಡಿದ್ದು, ಬರುವ ವರ್ಷದಿಂದಲೇ ಎಂಬಿಬಿಎಸ್‌ ಕೋರ್ಸ್‌ ಆರಂಭವಾಗಲಿದೆ. 50 ಹಾಸಿಗೆಯ ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ’ ಎಂದು ಹೇಳಿದರು.

‘ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ನಷ್ಟ ಕಟ್ಟಿಕೊಡುವ ಕೆಲಸ ಮಾಡಿದೆ.ವಿವಿಧ ವೃತ್ತಿಯ ಕಸಬುದಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಸಹ ಮಾಡಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಹಳಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಉತ್ತಮ ರೀತಿಯಲ್ಲಿ ನಿಯಂತ್ರಣ ಮಾಡಿದ್ದೇವೆ. ಲಾಕ್‌ಡೌನ್‌ ಮುಗಿದ ಬಳಿಕ ಜನರು ಗಂಭೀರವಾಗಿ ತೆಗೆದುಕೊಳ್ಳದೆ, ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೆ ಲಘುವಾಗಿ ಪರಿಗಣಿಸಿದ್ದರಿಂದ ಸೋಂಕಿತರ ಪ್ರಮಾಣ ಹೆಚ್ಚಿತು’ ಎಂದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಫೌಜಿ಼ಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT