ಶನಿವಾರ, ಫೆಬ್ರವರಿ 27, 2021
31 °C
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗಾಗಿ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ

ಮತ್ತೊಮ್ಮೆ ದಿಗ್ವಿಜಯಕ್ಕೆ ನಾವೆಲ್ಲ ಒಟ್ಟಾಗೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ಸ್ವಾಮಿ ವಿವೇಕಾನಂದರ ಕಲ್ಪನೆಯ ಸ್ವಾಭಿಮಾನಿ ರಾಷ್ಟ್ರದ ಕಲ್ಪನೆ ಇವತ್ತು ನನಸಾಗಿದೆ. ಜಗತ್ತಿನ ಯಾವುದೇ ರಾಷ್ಟ್ರ ದುಡ್ಡು ಕೊಡುತ್ತೇನೆ ಎಂದಾಗಲೂ ಅದನ್ನು ನಿರಾಕರಿಸಿ ನನ್ನ ದೇಶ ನಾನೇ ಕಟ್ಟಿಕೊಳ್ಳುತ್ತೇನೆ ಎಂದು ಹೇಳುವಷ್ಟರ ಮಟ್ಟಿಗೆ ದೇಶ ಇವತ್ತು ಘನತೆಯಿಂದ ಎದ್ದು ನಿಂತಿದೆ’ ಎಂದು ಯುವ ಬಿಗ್ರೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗಾಗಿ ಯುವ ಬಿಗ್ರೇಡ್ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇರಳದ ಸಂತ್ರಸ್ತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊರತುಪಡಿಸಿ ಜನರೇ ನೂರಾರು ಕೋಟಿ ಪರಿಹಾರ ಹಣ ನೀಡಿರುವಾಗ, ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ದೇಶ ₹ 700 ಕೋಟಿ ಕೊಡುತ್ತದೆ ಎಂದಾಗ ಕೈ ಚಾಚಿ ನಿಂತು ಕೊಡಿ, ಕೊಡಿ ಹೇಳುವ ಈ ಅಯೋಗ್ಯರಿಗೆ ನಾಚಿಕೆಯಾಗಬೇಡವೆ? ಕೇರಳದ ವಿಚಾರದಲ್ಲಿ ವಿದೇಶಗಳ ಆರ್ಥಿಕ ನೆರವು ನಿರಾಕರಿಸಿದ ಪ್ರಧಾನಿ ಮೋದಿ ಅವರ ಬಗ್ಗೆ ನಮಗೆ ಬಹಳ ಹೆಮ್ಮೆ ಇದೆ’ ಎಂದು ತಿಳಿಸಿದರು.

‘ಯುಎಇ ತಾನು ಹಣ ಕೊಡುತ್ತೇನೆ ಎಂದು ಹೇಳಿಲ್ಲ. ಕೆಲ ಅಯೋಗ್ಯರು ಬೇಕಂತಲೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಭಾರತವನ್ನು ಕೆಳಮಟ್ಟದಿಂದ ನೋಡುವ ಬುದ್ದಿ ತಮ್ಮದಲ್ಲ. ಕಮ್ಯೂನಿಸ್ಟರಿಗೆ, ಎಡಪಂಥಿಯರಿಗೆ, ನಗರ ನಕ್ಸಲರಿಗೆ ಇಂತಹದ್ದು ಬಿಟ್ಟು ಬೇರೇನೂ ಗೊತ್ತಿಲ್ಲದಿರುವುದರಿಂದ ಇವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಆ ದೇಶ ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಿಸಿತು’ ಎಂದು ಹೇಳಿದರು.

‘ಎಲ್ಲಿಯವರೆಗೆ ನಮ್ಮಲ್ಲಿ ಸ್ವಾಭಿಮಾನವಿರುತ್ತದೋ ಅಲ್ಲಿಯವರೆಗೆ ನಾವು ಜಗತ್ತನ್ನು ಆಳುತ್ತೇವೆ. ಅದನ್ನು ಕಳೆದುಕೊಂಡರೆ ಜಗತ್ತಿನವರೆಲ್ಲರೂ ನಮ್ಮನ್ನು ಆಳಲು ಆರಂಭಿಸುತ್ತಾರೆ ಎಂದು ವಿವೇಕಾನಂದರು ಹೇಳಿದರು. ಇವತ್ತು ಕೇರಳದ ಪರಿಹಾರ ನಿರಾಕರಣೆ ವಿಚಾರದಲ್ಲಿ ಭಾರತ ಅದೇ ಸ್ವಾಭಿಮಾನ ಪ್ರದರ್ಶನ ಮಾಡಿದೆ. ಇವತ್ತು ಭಾರತ ಜಗತ್ತನ್ನು ಆಳುವ ಕಾಲ ಸನ್ನಿಹಿತವಾಗಿದೆ’ ಎಂದರು.

‘ಇವತ್ತು ಅನೇಕರು ಪ್ರಧಾನಿ ಅವರ ಉಡುಪಿನ ಬಗ್ಗೆ ಮಾತನಾಡುತ್ತಾರೆ. ಒಳಗಿನ ಸತ್ವ ಗಮನಿಸದೆ ಹೊರಗಿನ ಉಡುಪಿನ ಬಗ್ಗೆ ಮಾತನಾಡಿಕೊಳ್ಳುವ ಪ್ರಕ್ರಿಯೆ ವಿವೇಕಾನಂದರ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಮ್ಮಷ್ಟು ವಿಶಾಲ ಹೃದಯಿಗಳು ಜಗತ್ತಿನ ಇತರೆಡೆ ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗಲಾರರು’ ಎಂದು ತಿಳಿಸಿದರು.

‘ಇವತ್ತಿನ ಭಾರತ ತುಂಬಾ ಎತ್ತರಕ್ಕೆ ಬೆಳೆದು ನಿಂತಿದೆ. ಎಷ್ಟು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದೇವೆ ಎಂದರೆ ಇಮ್ರಾನ್ ಖಾನ್ ಪ್ರಧಾನಿಯಾಗುವ ಮುಂಚೆಯೇ ಪಾಕಿಸ್ತಾನದ ಸೇನೆ ಭಾರತದ ಎದುರು ಮಂಡಿಯೂರಲು ಸಿದ್ಧವಾಗಿದೆ. ಪಾಕಿಸ್ತಾನ ಅಮೆರಿಕದ ಎದುರು ಸಾಲಕ್ಕೆ ಕೈಒಡ್ಡಿ ನಿಲ್ಲುವ ಹೊತ್ತಿನಲ್ಲಿ ವಿವೇಕಾನಂದರ ದೂರದೃಷ್ಟಿಯ ಭಾರತ ಸಾಕಾರಗೊಂಡಿದೆ. ಜಗತ್ತಿನ ಆರನೇ ಆರ್ಥಿಕ ಶಕ್ತಿಯಾಗಿ ದೇಶ ತಲೆ ಎತ್ತಿ ನಿಂತಿದೆ’ ಎಂದು ಹೇಳಿದರು.

‘ಇವತ್ತು ನಮ್ಮಗಳ ನಡುವೆ ಹಿಂದೂ–ಮುಸ್ಲಿಂ, ಮೇಲ್ವರ್ಗ–ಕೆಳವರ್ಗ ಉತ್ತರದವರು– ದಕ್ಷಿಣದವರು ಎಂದು ಬೆಂಕಿ ಹಚ್ಚಿ, ವಿಭಜಿಸುವವರು ಬಹಳ ಜನರಿದ್ದಾರೆ. ಹಿಂದೊಮ್ಮೆ ವಿವೇಕಾನಂದರ ಚಿಕಾಗೊ ಸಮ್ಮೇಳನದ ಭಾಷಣದ ಮೂಲಕ ದಿಗ್ವಿಜಯ ಮಾಡಿದರು. ಇದೀಗ ಮತ್ತೊಮ್ಮೆ ದಿಗ್ವಿಜಯ ಮಾಡಬೇಕಾದ ಹೊತ್ತು ಬಂದಿದೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗೋಣ’ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಸಹೋದರಿ ನಿವೇದಿತಾ ಅವರ ಪ್ರತಿಮೆ ಇದ್ದ ರಥದ ಶೋಭಾಯಾತ್ರೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯೋಧ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಡಾ.ಮಧುಕರ್, ಸಿದ್ಧಲಿಂಗಸ್ವಾಮಿ, ಯುವ ಬಿಗ್ರೇಡ್ ಸಂಚಾಲಕ ಅಭಿಲಾಷ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು