ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಕೃಷಿ ಕಾಯ್ದೆ ಹಿಂಪಡೆಯಲು ಗಡವು : ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ತಿರಸ್ಕರಿಸಲು ರೈತರಿಗೆ ಕೋಡಿಹಳ್ಳಿ ಚಂದ್ರಶೇಖರ್ ಸಂದೇಶ
Last Updated 17 ಫೆಬ್ರುವರಿ 2023, 5:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿವರಾತ್ರಿಯ ಒಳಗೆ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಬಿಜೆಪಿಯನ್ನು ತಿರಸ್ಕರಿಸುವ ಸಂದೇಶವನ್ನು ರೈತರಿಗೆ ರವಾನಿಸಲಾಗುವುದು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತವಿರೋಧಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ಹಿಂಪಡೆದಿದ್ದರೂ ರಾಜ್ಯದಲ್ಲಿ ಮಾತ್ರ ಈ ಮೂರು ಕಾಯ್ದೆಗಳು ಜಾರಿಯಲ್ಲಿವೆ. ಬಿಜೆಪಿ ಸರ್ಕಾರ ಕೃಷಿಗೆ ಉತ್ತೇಜನ ನೀಡುವ ಬದಲಿಗೆ ನಿರ್ಣಾಮ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಶೇ 90 ರಷ್ಟು ತರಕಾರಿಗಳು ಎಪಿಎಂಸಿಗಳಿಗೆ ಬರುತ್ತಿಲ್ಲ. ಮಾರುಕಟ್ಟೆಗಳು ತೆರಿಗೆಯಿಲ್ಲದೆ ನಿರ್ಜೀವ ಸ್ಥಿತಿಗೆ ತಲುಪುತ್ತಿವೆ. ಭೂಸುಧಾರಣೆಯ ಕಾಯ್ದೆ ಮೂಲಕ ರೈತರ ಜಮೀನನ್ನು ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುವಂತೆ ಮಾಡಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯ ಮೂಲಕ ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರವು ಚುನಾವಣೆ ಸಮೀಪಿಸುತ್ತಿದ್ದಂತೆ ಅನುಷ್ಠಾನ ಸಾಧ್ಯವಿಲ್ಲದ ಆಸೆ ಆಮಿಷಗಳನ್ನು ತೋರಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ ರೈತರ ಪಾಲಿಗೆ ಶೂನ್ಯವಾಗಿದೆ ಎಂದರು.

ಪ್ರಕೃತಿಕ ವಿಪತ್ತುಗಳಿಂದ ಹಾನಿಗೆ ಒಳಗಾಗುವ ಬೆಳೆಗಳಿಗೆ ಪರಿಹಾರ ನೀಡಲು ಪ್ರತ್ಯೇಕ ನಿಧಿ ಸ್ಥಾಪಿಸುವುದು, ಕೃಷ್ಣ, ಗೋದಾವರಿ ಹಾಗೂ ಮೇಕೆದಾಟು ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಸೇರಿದಂತೆ 20ಕ್ಕೂ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಹಿತದೃಷ್ಟಿ ಕಾಯುವವರಾದಲ್ಲಿ ರೈತ ವಿರೋಧಿ ಮೂರು ಕಾಯ್ದೆಗಳನ್ನು ಶಿವರಾತ್ರಿಯೊಳಗೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಎಷ್ಟು ಬಾರಿ ಬಂದು ಹೋದರೂ, ಹಣ ಆಮಿಷ ಒಡ್ಡಿದರೂ ರಾಜ್ಯದಲ್ಲಿ ರೈತ ವಿರೋಧ ಕಟ್ಟಿಕೊಳ್ಳುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 25ರಿಂದ 30 ಕ್ಷೇತ್ರಗಳಲ್ಲಿ ರೈತ ಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಡೆದ ಸಭೆಯಲ್ಲಿಯೇ 10 ಮಂದಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮಗೆ ಸೂಕ್ತವಾಗಿರುವ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಂಘದ ಬೆಂಬಲಿತರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಗೂ ಮುನ್ನ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಮಹಿಳಾ ಘಟಕದ ಸಂಚಾಲಕಿ ಉಮಾ, ಜಿಲ್ಲಾ ಅಧ್ಯಕ್ಷ ಎಚ್.ಪಿ.ರಾಮನಾಥರೆಡ್ಡಿ, ವೇಣುಗೋಪಾಲ್, ಮುನಿನಂಜಪ್ಪ, ರಾಮಾಂಜಿನಪ್ಪ, ಮಂಜುನಾಥ್, ನಾರಾಯಣಸ್ವಾಮಿ, ರಮಣಾರೆಡ್ಡಿ, ಬಲರಾಮಪ್ಪ, ಲಕ್ಷ್ಮಣರೆಡ್ಡಿ, ಮಾಳಪ್ಪ, ಶಂಕರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT