ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಪುರುಷರ ದೌರ್ಜನ್ಯಕ್ಕೆ ನಲುಗುತ್ತಿರುವ ನಾರಿಯರು

ಕೋವಿಡ್‌ ಸೃಷ್ಟಿಸಿದ ಮಾನಸಿಕ ತುಮುಲ, ಆರ್ಥಿಕ ಸಂಕಷ್ಟಗಳಿಂದ ಹೆಚ್ಚಿದ ಮಹಿಳೆಯರ ಮೇಲಿನ ಹಿಂಸಾ ಕೃತ್ಯಗಳು
Last Updated 29 ಜುಲೈ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕುಡುಕ ಗಂಡನ ಕಾಟ ಸಾಕಾಗಿದೆ ಸ್ವಾಮಿ. ಕೊರೊನಾ ನೆವದಲ್ಲಿ ದುಡಿಮೆ ಬಿಟ್ಟವನು ಮದ್ಯ ಮಾತ್ರ ಬಿಡಲೊಲ್ಲ. ಮಕ್ಕಳನ್ನು ಸಾಕಲು ಹೆಣಗುತ್ತಿರುವ ನಾನು ಗಂಡನಿಗೆಲ್ಲಿಂದ ಕುಡಿಯಲು ದಿನಾ ದುಡ್ಡು ತರಲಿ. ದಯವಿಟ್ಟು ಆತನಿಂದ ಮುಕ್ತಿ ಕೊಡಿಸಿ’

‘ಸಾರ್, ಫೇಸ್‌ಬುಕ್‌ನಲ್ಲಿ ಪರಿಚಯವಾದ ಚೆಲುವೆಗಾಗಿ ಲಕ್ಷಗಟ್ಟಲೇ ಸುರಿದು ಕೈ ಬರಿದು ಮಾಡಿಕೊಂಡು ಸಾಲಗಾರನಾಗಿರುವ ಗಂಡ ಇದೀಗ ಕೆಲಸ, ಆದಾಯವಿಲ್ಲದ ಸಿಟ್ಟನ್ನು ತಂದು ಬಡಪಾಯಿಯಾದ ನನ್ನ ಮೇಲೆ ಮಕ್ಕಳ ಮೇಲೆ ತೋರಿಸುತ್ತಿದ್ದಾನೆ. ಹಣಕ್ಕಾಗಿ ಪೀಡಿಸಿ ಮನೆಯಲ್ಲಿ ಇರಗೊಡಲೊಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮಕ್ಕಳಿವೆ. ದಯವಿಟ್ಟು ಗಂಡನ ಚಿತ್ರಹಿಂಸೆಯಿಂದ ಪರಿಹಾರ ಕೊಡಿಸಿ’

‘ಮೇಡಂ, ಕೋವಿಡ್‌ ಬಂದ ಮೇಲೆ ಕೆಲಸ ಬಿಟ್ಟು ಮನೆ ಸೇರಿರುವ ಗಂಡ ಪದೇ ಪದೇ ಸೆಕ್ಸ್‌ಗಾಗಿ ಪೀಡಿಸುತ್ತಾನೆ. ಸಹಕರಿಸದಿದ್ದರೆ ವಿವಿಧ ನೆಪಗಳಲ್ಲಿ ಗೋಳು ಹೊಯ್ದುಕೊಳ್ಳುತ್ತಾನೆ. ಮನೆ ಕೆಲಸಗಳನ್ನು ಮಾಡಿಕೊಂಡು, ಇಬ್ಬರು ಮಕ್ಕಳನ್ನು ಸಂಭಾಳಿಸುವುದರೊಳಗೆ ಹೈರಾಣಾಗುವ ನನಗೆ ಗಂಡನ ಕಾಟ ತಾಳದಾಗಿದೆ. ದಯವಿಟ್ಟು ಪರಿಹಾರ ತಿಳಿಸಿ’

ರಾಜ್ಯದಲ್ಲಿ ಕೋವಿಡ್‌ ಕಾಣಿಸಿಕೊಂಡು ಲಾಕ್‌ಡೌನ್‌ ಜಾರಿಗೊಂಡ ತರುವಾಯ ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಇಂತಹ ಸಾಕಷ್ಟು ದೂರುಗಳು ಮಹಿಳಾ ಸಹಾಯವಾಣಿ, ‘ಸಖಿ’ ಕೇಂದ್ರಗಳಿಗೆ ಬಂದಿವೆ. ಬರುತ್ತಲೇ ಇವೆ.

ಲಾಕ್‌ಡೌನ್‌, ಕೋವಿಡ್‌ನಿಂದಾಗಿ ಉದ್ಯೋಗ ನಷ್ಟ, ವರ್ಕ್‌ ಫ್ರಮ್‌ ಹೋಂ ಪರಿಕಲ್ಪನೆಯ ಜಾರಿಯಿಂದಾಗಿ ಹೆಚ್ಚಿನ ಮಂದಿ ಇದೀಗ ಮನೆಯಲ್ಲಿಯೇ ಉಳಿಯುವಂತಾಗಿದೆ. ಇದರಿಂದ ಸೃಷ್ಟಿಯಾದ ಮಾನಸಿಕ ತುಮುಲ ಮತ್ತು ಆರ್ಥಿಕ ಸಂಕಷ್ಟಗಳ ಹತಾಶೆಯು ಮಹಿಳೆಯರ ಮೇಲಿನ ದೌರ್ಜನ್ಯದ ರೂಪಗಳಲ್ಲಿ ವ್ಯಕ್ತವಾಗುತ್ತಿವೆ ಎನ್ನುತ್ತಾರೆ ಮನೋರೋಗತಜ್ಞರು.

ಕೊರೊನಾದಿಂದ ಸೃಷ್ಟಿಯಾಗಿರುವ ಪ್ರತಿಕೂಲ ಸನ್ನಿವೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿವೆ. ಆದರೆ ಮರ್ಯಾದೆಗೆ ಅಂಜಿ ಬಹುತೇಕ ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿಲ್ಲ. ಅನೇಕ ಮಹಿಳೆಯರು ಗಂಡನ ಚಿತ್ರಹಿಂಸೆಗೆ ಬೇಸತ್ತು ವಿಚ್ಛೆಧನ ಪಡೆಯುವ ನಿರ್ಧಾರಕ್ಕೆ ಕೂಡ ಬಂದಿದ್ದಾರೆ ಎನ್ನಲಾಗಿದೆ.

ಕೆಲಸವಿಲ್ಲದೆ ಸೋಮಾರಿಯಾದ ಗಂಡ, ಶಾಲಾ–ಕಾಲೇಜುಗಳಿಲ್ಲದೆ ಮನೆ ಸೇರಿದ ಮಕ್ಕಳಿಂದ ಒಂದೆಡೆ ಕೆಲಸದ ಒತ್ತಡ ನಿಭಾಯಿಸಲು ಹೆಣಗುತ್ತಿರುವ ಗೃಹಿಣಿಯರು, ಇನ್ನೊಂದೆಡೆ ಪತಿ ನೀಡುವ ಹಿಂಸೆ ತಾಳದೆ ರೋಸತ್ತು ಹೋಗಿದ್ದಾರೆ ಎನ್ನುತ್ತಾರೆ ಆಪ್ತಸಮಾಲೋಚಕರು.

ಕಳೆದ ಏಪ್ರಿಲ್‌, ಮೇ, ಜೂನ್ ಮೂರೇ ತಿಂಗಳಲ್ಲಿ ಜಿಲ್ಲೆಯಲ್ಲಿ 10 ಅತ್ಯಾಚಾರ, 6 ವರದಕ್ಷಿಣೆ, 3 ಆತ್ಮಹತ್ಯೆ, 8 ಗಂಡನಿಂದ ಚಿತ್ರಹಿಂಸೆ ಪ್ರಕರಣಗಳು, 14 ದೌರ್ಜನ್ಯ ಪ್ರಕರಣಗಳು ಸೇರಿದಂತೆ ಸುಮಾರು 40ಕ್ಕೂ ಅಧಿಕ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಪೊಲೀಸ್‌ ಠಾಣೆಗಳ ಮೆಟ್ಟಿಲೇರಿವೆ.

ಉಳಿದಂತೆ ಲೆಕ್ಕವಿಲ್ಲದಷ್ಟು ಮಹಿಳೆಯರು ಮಹಿಳಾ ಸಹಾಯವಾಣಿ, ಸಖಿ ಕೇಂದ್ರಗಳನ್ನು ಸಂಪರ್ಕಿಸಿ ಅಂಕೆ ತಪ್ಪಿದ ತಮ್ಮ ಪತಿಗೆ ಬುದ್ದಿ ಹೇಳಿಸುವ ಕೆಲಸ ಮಾಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸದೆ ಪತ್ನಿ ಪೀಡಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ ಉದಾಹರಣೆಗಳಿವೆ.

ಪೊಲೀಸ್‌ ಠಾಣೆಗಳು, ಎಲ್ಲ ತಾಲ್ಲೂಕಿನ ಮಹಿಳಾ ಸಹಾಯವಾಣಿಗಳು, ಸಖಿ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಸುಮಾರು 200ಕ್ಕೂ ಅಧಿಕ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಎಂದು ತಿಳಿದು ಬಂದಿದೆ.

ಕೋವಿಡ್‌ ಪರಿಸ್ಥಿತಿ ತಿಳಿಗೊಂಡು ಜನಜೀವನ, ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವರೆಗೂ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇರಲಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ

ತಿಂಗಳು ದೌರ್ಜನ್ಯ ಗಂಡನ ಕಿರುಕುಳ ವರದಕ್ಷಿಣೆ ಕಿರುಕುಳ ಅತ್ಯಾಚಾರ ಆತ್ಮಹತ್ಯೆ
ಏಪ್ರಿಲ್ 3 1 1 2 1
ಮೇ 10 2 1 7 1
ಜೂನ್ 1 5 4 1 1
ಒಟ್ಟು 14 8 6 10 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT