‘ವಿಶ್ವ ಆತ್ಮಹತ್ಯೆ ತಡೆ ಸಪ್ತಾಹ’: ಸುಂದರ ಜೀವನಕ್ಕೆ ಸಕಾರಾತ್ಮಕ ಚಿಂತನೆ ಅಗತ್ಯ

7
ಜಾಗೃತಿ ಜಾಥಾಗೆ ಚಾಲನೆ

‘ವಿಶ್ವ ಆತ್ಮಹತ್ಯೆ ತಡೆ ಸಪ್ತಾಹ’: ಸುಂದರ ಜೀವನಕ್ಕೆ ಸಕಾರಾತ್ಮಕ ಚಿಂತನೆ ಅಗತ್ಯ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಅವಸರದ ಮನಸ್ಥಿತಿಯ ಆಲೋಚನೆಯಿಂದ ಅಥವಾ ಆಘಾತಕರ ಆಲೋಚನೆಯಿಂದ ಒಂದು ನಿಮಿಷ ಹೊರ ಬಂದು ಸಕಾರಾತ್ಮಕ ಮತ್ತು ಸಂಯಮದಿಂದ ಆಲೋಚಿಸಿದರೆ ಸುಂದರ ಜೀವನ ನಡೆಸಬಹುದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರವಿಶಂಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ‘ವಿಶ್ವ ಆತ್ಮಹತ್ಯೆ ತಡೆ ಸಪ್ತಾಹ’ದ ನಿಮಿತ್ತ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ನಗರದ ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಸ್ಯೆಯು ಜೀವನದ ಒಂದು ಭಾಗ. ಅದನ್ನು ಎದುರಿಸಿ ಜೀವಂತವಾಗಿರಿ. ಪ್ರತಿ ಮನುಷ್ಯನಿಗೂ ಸಮಸ್ಯೆಗಳು ಇರುತ್ತವೆ. ಅದನ್ನು ಎದುರಿಸುವ ಶಕ್ತಿ ಸಹಾ ಅವರಿಗೆ ಇರುತ್ತದೆ. ಅದನ್ನು ತಿಳಿಯದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಎಂಬ ಪೈಶಾಚಿಕ ಕೃತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳು, ಸಂಘ ಸಂಸ್ಥೆಗಳು ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ’ ಎಂದು ಹೇಳಿದರು.

‘ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಬದುಕುವುದೇ ಬೇಡ ಸಾಯುವುದೇ ಲೇಸು ಎಂಬ ಆಲೋಚನೆ ಬಂದಾಗ ಒಂದು ನಿಮಿಷ ನಿಮ್ಮ ತೀರ್ಮಾನ ಮುಂದೂಡಿ, ನಂಬಿಕಸ್ಥ ವ್ಯಕ್ತಿಗಳ ಜತೆ ಮನದೊಳಗಿನ ದುಗುಡ ತೋಡಿಕೊಂಡರೆ ನಿಮ್ಮ ನಿಧಾರವೇ ಬದಲಾಗುವಂತಹ ಉತ್ತಮ ಸಲಹೆಗಳು ದೊರೆಯುತ್ತವೆ’ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ‘ಈ ಹಿಂದೆ ಜನರ ಮಾನಸಿಕ ಆರೋಗ್ಯ ಸ್ಥಿತಿ ಚೆನ್ನಾಗಿತ್ತು. ಆದರೆ ಇವತ್ತು ಅದು ಕಡಿಮೆಯಾಗುತ್ತಿದೆ. ಪರಿಣಾಮ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿರುವುದು ಶೋಚನಿಯ. ಇವತ್ತು ಮಾನಸಿಕ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಿ, ಸೂಕ್ತ ಸಲಹೆ, ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರವೇ ಒಳ್ಳೆಯ ದೇಶ ಕಟ್ಟಲು ಸಾಧ್ಯ’ ಎಂದು ತಿಳಿಸಿದರು.

‘ಆತ್ಮಹತ್ಯೆ ಕುರಿತು ಜನರಲ್ಲಿ ತಿಳಿವಳಿಕೆ ತರಬೇಕು ಎನ್ನುವ ಉದ್ದೇಶದಿಂದಲೇ ವಿಶ್ವಸಂಸ್ಥೆ ಈ ದಿನಾಚರಣೆಯನ್ನು ಆಚರಣೆಗೆ ತಂದಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು ಮಾನಸಿಕ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಿ, ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಜತೆಗೆ ಅವರಿಗೆ ಅಗತ್ಯವಾದ ಒಳ್ಳೆಯ ಲಭ್ಯವಿರುವ ಚಿಕಿತ್ಸೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗಟ್ಟುವ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಿತ್ರಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಣ್ಣರೆಡ್ಡಿ, ವೈದ್ಯ ಮಹೇಶ್ ಉಪಸ್ಥಿತರಿದ್ದರು.

ಅಂಕಿಅಂಶಗಳು...

ಜಿಲ್ಲೆಯ ಆತ್ಮಹತ್ಯೆ ಪ್ರಕರಣಗಳ ವಿವರ

* 2016-17ನೇ ಸಾಲಿನಲ್ಲಿ ಮಹಿಳೆಯರು 390 , ಪುರುಷರು 447 –ಒಟ್ಟು 837

* 2017-18ನೇ ಸಾಲಿನಲ್ಲಿ ಮಹಿಳೆಯರು 275, ಪುರುಷರು 307– ಒಟ್ಟು 582

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !