ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯಲ್ಲಿ ‘ಯಾತ್ರೆ’ ರಾಜಕಾರಣ

ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಏರಿದ ಕಾವು
Last Updated 30 ಜುಲೈ 2022, 4:57 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಮತದಾರರ ಮನದಲ್ಲಿ ನೆಲೆಯೂರಲು ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳು ನಾನಾ ತಂತ್ರಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಪುಣ್ಯ ಕ್ಷೇತ್ರಗಳಿಗೆ ಜನರನ್ನು ಕಳುಹಿಸಿಕೊಡುವ ಕೆಲಸಗಳು ಹೆಚ್ಚಿನದಾಗಿಯೇ ನಡೆಯುತ್ತಿವೆ.

ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಾಸಕ ಎಂ.ಕೃಷ್ಣಾರೆಡ್ಡಿ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅಭ್ಯರ್ಥಿಗಳಾಗುವುದು ಖಚಿತವಾಗಿದೆ. ಮೂರನೇ ಬಾರಿಗೆ ಹಾಲಿ ಮತ್ತು ಮಾಜಿ ಶಾಸಕರು ಗೆಲುವಿಗಾಗಿ ತಂತ್ರ ಪ್ರತಿತಂತ್ರಗಳನ್ನು ಈಗಾಗಲೇ ಎಣೆಯುತ್ತಿದ್ದಾರೆ. ಬಿಜೆಪಿ ವಲಯದಲ್ಲಿ ಮಾತ್ರ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿದೆ.

ಕೆ.ಎಂ.ಕೆ ಟ್ರಸ್ಟ್ ಮೂಲಕ ಸಮಾಜಸೇವೆ ಮಾಡುತ್ತಿರುವ ಜಿ.ಎನ್.ವೇಣುಗೋಪಾಲ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯ ನಾಯಕರು ಚಿಂತಾಮಣಿ ಕ್ಷೇತ್ರದಲ್ಲಿ ‌ಯುವಜನರನ್ನು ಸೆಳೆಯಲು ಕ್ರೀಡೆಗಳ ಆಯೋಜನೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ದೇವಾಲಯ, ಮಸೀದಿ, ಚರ್ಚ್‌ಗಳ ಅಭಿವೃದ್ಧಿ ಹೆಸರಿನಲ್ಲಿ ಹಣಸಹಾಯ, ವೃದ್ಧ ಅಸಹಾಯಕರಿಗೆ ಸೌಲಭ್ಯಗಳ ವಿತರಣೆ, ಉಚಿತ ಆರೋಗ್ಯ ಶಿಬಿರಗಳ ವ್ಯವಸ್ಥೆ, ಪುಣ್ಯ ಕ್ಷೇತ್ರಗಳ ಯಾತ್ರೆಗೆ ಕಳುಹಿಸುವುದು, ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕನ್ನು ಪ್ರವಾಸಗಳಿಗೆ ಕರೆದೊಯ್ಯುವುದು,ಯಾರಾದರೂ ಮೃತಪಟ್ಟರೆ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳುವುದು, ಆರ್ಥಿಕವಾಗಿ ನೆರವು ನೀಡುವುದು, ಊರಜಾತ್ರೆ, ದೀಪೋತ್ಸವ ಮುಂತಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು...ಹೀಗೆ ಚುನಾವಣಾ ತಾಲೀಮು ಜೋರಾಗಿಯೇ ನಡೆಯುತ್ತಿದೆ.

ಒಬ್ಬರು ಶಾಲೆಗಳಲ್ಲಿ ಮಕ್ಕಳಿಗೆಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದರೆ ಮತ್ತೊಬ್ಬರು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಪಕ್ಷಗಳ ಕೆಳಹಂತದ ಮುಖಂಡರಿಗೆ ವಾರಾಂತ್ಯದಲ್ಲಿ ಮೋಜಿನ ಪಾರ್ಟಿಗಳ ಆಯೋಜನೆಯೂ ಎಗ್ಗಿಲ್ಲದೆ ನಡೆಯುತ್ತಿದೆ.

ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್, ಕೆ.ಎಂ.ಕೆ ಟ್ರಸ್ಟ್ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಯನ್ನು ಗುರುತಿಸದಿರುವುದರಿಂದ ಹೆಚ್ಚಿನ ಚಟುವಟಿಕೆ ಕಂಡುಬರುತ್ತಿಲ್ಲ. ಆದರೂ ಕೆಳ ಹಂತದಲ್ಲಿ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿದ್ದಾರೆ.

ಶಾಸಕ ಎಂ.ಕೃಷ್ಣಾರೆಡ್ಡಿ ಮೂರನೇ ಬಾರಿಗೆ ಜಯಬೇರಿ ಭಾರಿಸಿ ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ. ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಎರಡು ಚುನಾವಣೆಯಲ್ಲಿ ಸೋತ್ತಿದ್ದು ಈ ಬಾರಿ ಗೆಲ್ಲುವ ಛಲ ಹೊಂದಿದ್ದಾರೆ. ‘ಮುಂದಿನ ಎಂಎಲ್‌ಎ’ ನಮ್ಮವರೇ ಎಂದು ಎರಡೂ ಪಕ್ಷದ ಕಾರ್ಯಕರ್ತರು ಈಗಲೇ ಬೀಗುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪ ಅವರ ಗುಂಪಿನ ಬಹುತೇಕರು ಜೆಡಿಎಸ್, ಕೆ.ಎಂ.ಕೆ ಟ್ರಸ್ಟ್‌ನ ವೇಣುಗೋಪಾಲ್ ಹಾಗೂ ಎಂ.ಸಿ.ಸುಧಾಕರ್ ಗುಂಪಿಗೆ ಸೇರ್ಪಡೆ ಆಗಿದ್ದಾರೆ. ಉಳಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅವರು ಪಕ್ಷದ ಒಳಗಿದ್ದರೂ ಹೊರಗಿದ್ದರೂ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮತ ಚಲಾಯಿಸುವುದು ಶತಸಿದ್ಧ ಎನ್ನುವ ಮಾತುಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT