ಗುರುವಾರ , ಡಿಸೆಂಬರ್ 12, 2019
17 °C
ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿದ ಬದಲಾದ ನಿಲುವು

ಬಿಜೆಪಿ ಸೇರಿದ ಕೆ.ಸುಧಾಕರ್: ಅಂದು ಕೋಮುವಾದಿ, ಇಂದು ಜೈ ಮೋದಿ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸಂವಿಧಾನ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ರಕ್ಷಣೆ ಇರುವುದಿಲ್ಲ’

–ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಗಳಲ್ಲಿ ಅಂದಿನ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಅವರು ಭಾಷಣದ ಪರಿಯಿದು.

ಇದೇ ಸುಧಾಕರ್ ಅವರು ಗುರುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ವೇದಿಕೆಯಲ್ಲಿ, ‘ಬಿಜೆಪಿ ತತ್ವ ಸಿದ್ಧಾಂತ, ಆಶಯವನ್ನು ಒಪ್ಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಸಮರ್ಥ ಮತ್ತು ಆದರ್ಶದ ನಾಯಕತ್ವದಲ್ಲಿ ನಂಬಿಕೆ ಇಟ್ಟು, ಇವತ್ತು ಶಿಸ್ತುಬದ್ಧ ಪಕ್ಷಕ್ಕೆ ಅಂತಃಕರಣ, ಸಂತೋಷದಿಂದ ಬಂದಿದ್ದೇವೆ’ ಎಂದು ಹೇಳುವ ಮೂಲಕ ಕ್ಷೇತ್ರದ ಮತದಾರರ ಹುಬ್ಬೆರುವಂತೆ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಎರಡು ಬಾರಿ ‘ಕೈ’ ಟಿಕೆಟ್‌ನಿಂದ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಅವರು ಕಳೆದ ಜುಲೈನಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೂ ಬಿಜೆಪಿಯ ತತ್ವ, ಸಿದ್ಧಾಂತದ ಕಡು ವೈರಿಯಂತೆ ಮಾತನಾಡುತ್ತ ಬಂದಿದ್ದರು. ಕಾಂಗ್ರೆಸ್‌ನಲ್ಲಿ ಇರುವಷ್ಟು ದಿನ ‘ಬಿಜೆಪಿ ಸರ್ಕಾರ ಆರ್‍ಎಸ್‍ಎಸ್ ಸಂಘ ಪರಿವಾರದ ಒಳ ಸಂಚುಗಳನ್ನು ಜಾರಿಗೊಳಿಸಲು ಮುಂದಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ’ ಎಂದು ಪದೇ ಪದೇ ಆರೋಪಿಸಿದ್ದರು.

ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ‘ಜಾತಿ, ಧರ್ಮಗಳ ನಡುವೆ ದೊಡ್ಡ ಕಂದಕ ಸೃಷ್ಟಿಸುವ ಮೂಲಕ ಕೋಮು ಸಾಮರಸ್ಯ ಹಾಳು ಮಾಡುತ್ತಿರುವ ಕೋಮುವಾದಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದಿಂದ ದೂರ ಇಡಬೇಕು ಎಂಬ ಏಕೈಕ ಕಾರಣಕ್ಕೆ ಮೈತ್ರಿಗೆ ಮುಂದಾಗಿದ್ದೇವೆ’ ಎಂದು ಕಾಂಗ್ರೆಸ್ ವರಿಷ್ಠರ ನಡೆ ಸಮರ್ಥಿಸಿಕೊಂಡಿದ್ದರು.

ಅವರೇ ಗುರುವಾರ ಬಿಜೆಪಿ ಸೇರ್ಪಡೆಗೊಂಡ ಬಳಿಕ, ‘ಅಧಿಕಾರಕ್ಕಾಗಿ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡವು. ಅದರಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಲು ಆಗಿಲ್ಲ. ಹಾಗಾಗಿ ನಮಗೆ ಬೇರೆ ದಾರಿ ಕಾಣಲಿಲ್ಲ’ ಎಂದು ಹೇಳಿದ ಮಾತು ಬದಲಾದ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಳ್ಳುವ ಪ್ರಯತ್ನದಂತೆ ಗೋಚರಿಸಿತು ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ, ಅವರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರಾ ಅಥವಾ ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಚರ್ಚೆಗೆ ಎಡೆ ಮಾಡಿತ್ತು. ಗುರುವಾರ ಸುಧಾಕರ್ ಅವರು ಬಿಜೆಪಿ ಸೇರುವ ಮೂಲಕ ಅದಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. ಅದರ ಬೆನ್ನಲ್ಲೇ ಅವರ ಬದಲಾದ ನಡೆ, ಮಾತಿನ ವೈಖರಿ ಜನರ ಬಾಯಿಗೆ ‘ಆಹಾರ’ವಾಗಿದೆ.

ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಕಟುವಾದ ಪದಗಳಿಂದ ಟೀಕಿಸುತ್ತ, ‘ದೇಶ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಕೋಮುವಾದಿಗಳಿಗೆ ಪಾಠ ಕಲಿಸಲು ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾಗಿದೆ’ ಎನ್ನುತ್ತಲೇ ಬಂದು, ಬದಲಾದ ಸನ್ನಿವೇಶದಲ್ಲಿ ಜರಿದ ಪಕ್ಷವನ್ನೇ ಸೇರಿ, ನಿಂದಿಸಿದವರನ್ನೇ ಕೊಂಡಾಡುವ ಪರಿಗೆ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಹಿಂದೆಲ್ಲ ಸುಧಾಕರ್ ಅವರು ಕಾಂಗ್ರೆಸ್ ಹೊಗಳಿ, ಬಿಜೆಪಿ ತೆಗಳುತ್ತಲೇ, ‘ಜನ ಮೂರ್ಖರಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಳ್ಳುವ ವಿವೇಚನೆ ಅವರಿಗೆ ಇದೆ’ ಎಂದು ಹೇಳುತ್ತಿದ್ದರು. ಇದೀಗ ಅವರ ರಾಜಕೀಯ ವಿರೋಧಿಗಳೆಲ್ಲ ಅದೇ ‘ಡೈಲಾಗ್’ ಹೇಳುತ್ತ ಸುಧಾಕರ್ ಅವರ ನಡೆಯನ್ನು ಖಂಡಿಸುತ್ತಿದ್ದಾರೆ.

**

ರಾಜ್ಯದ ಒಳಿತಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ವಿನಾ ವೈಯಕ್ತಿಕ ಆಸೆಗಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಆಶಯವನ್ನು ನಾವು ಮತ್ತೆ ಬಲಪಡಿಸಬೇಕು.
-ಡಾ.ಕೆ.ಸುಧಾಕರ್, ಅನರ್ಹ ಶಾಸಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು