ಬುಧವಾರ, ಡಿಸೆಂಬರ್ 8, 2021
21 °C
ಟೊಮೆಟೊಗೆ ಹೆಚ್ಚಿನ ಬೆಲೆ: ಬೆಳೆ ರಕ್ಷಣೆಗೆ ಮಾಲೀಕನಿಂದ ಅಕ್ರಮ ವಿದ್ಯುತ್ ಸಂಪರ್ಕ

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು: ತೋಟದ ಮಾಲೀಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಟೊಮೆಟೊಗೆ ಹೆಚ್ಚಿನ ಬೆಲೆ ಇದೆ. ಜನ ಮತ್ತು ಜಾನುವಾರುಗಳಿಂದ ಬೆಳೆ ಹಾನಿ ಮಾಡುತ್ತವೆ ಎಂದು ತಾಲ್ಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ತೋಟದ ಮಾಲೀಕರೊಬ್ಬರು ಟೊಮೆಟೊ ಹೊಲದ ಸುತ್ತ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಆದರೆ, ಬುಧವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ಯುವಕರೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕನ ಕುಟುಂಬದವರು ತೋಟದ ಮಾಲೀಕನನ್ನು ಹತ್ಯೆ ಮಾಡಿದ್ದಾರೆ. 

ಘಟನೆ ಹಿನ್ನೆಲೆ: ಮೇಕೆಗಳು ಸೇರಿದಂತೆ ಜಾನುವಾರು ಟೊಮೆಟೊಗೆ ನುಗ್ಗುತ್ತವೆ ಎಂದು ಅಶ್ವತ್ಥರಾವ್ (47) ಹೊಲದ ಸುತ್ತ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಮೇಕೆ ಮರಿಯೊಂದು ಟೊಮೆಟೊ ತೋಟಕ್ಕೆ ನುಗ್ಗಿದೆ. ಮರಿ ತರಲು ವಸಂತ ರಾವ್ (27) ತೆರಳಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ವಸಂತ ರಾವ್ ಕುಟುಂಬದ ಸದಸ್ಯರು ಇದರಿಂದ ಆಕ್ರೋಶಗೊಂಡಿದ್ದು ತೋಟದ ಬಳಿ ಬಂದ ಅಶ್ವತ್ಥರಾವ್ ಅವರನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಶ್ವತ್ಥರಾವ್ ಹಾಗೂ ವಸಂತ್ ರಾವ್ ಕುಟುಂಬಗಳ ನಡುವೆ ಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು. ಗ್ರಾಮಸ್ಥರು ಸಂಧಾನ ಮಾಡಿದ್ದರು.

ಅಶ್ವತ್ಥರಾವ್ ತೋಟದ ಪಕ್ಕದಲ್ಲಿಯೇ ವಸಂತ ರಾವ್ ಮೇಕೆ ಶೆಡ್ ಹಾಕಿದ್ದರು. ಗ್ರಾಮಸ್ಥರು ಮಧ್ಯೆ ಪ್ರವೇಶಿಸಿ ತೀವ್ರವಾಗಿ ಗಾಯಗೊಂಡಿದ್ದ ಅಶ್ವತ್ಥರಾವ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಕರೆದೊಯ್ಯುವೆ ವೇಳೆ ಮೃತಪಟ್ಟಿದ್ದಾರೆ‌ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು