ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟದಲ್ಲಿ ಅರಳಿದ ರೋಸ್‌ಪಿಂಕ್ ಲಿಲ್ಲಿ

ಮೊದಲ ಮಳೆಗೆ ಗುಲಾಬಿ ಬಣ್ಣದ ರಂಗು
Last Updated 20 ಏಪ್ರಿಲ್ 2022, 19:54 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಈ ಬಾರಿ ಬಿರು ಬಿಸಿಲು ಹೆಚ್ಚಾಗಿದೆ. ಬಿಸಿಲಿನ ಝಳಕ್ಕೆ ಮನುಷ್ಯರಲ್ಲದೇ ಪಶು ಪಕ್ಷಿ ಕ್ರಿಮಿ ಕೀಟಗಳು ತತ್ತರಿಸುತ್ತಿವೆ. ಹುಲ್ಲುಗರಿಕೆಗಳು ಒಣಗಿ ನಿಂತಿವೆ. ನಂದಿಬೆಟ್ಟ ಶ್ರೇಣಿಗಳೆಲ್ಲ ಒಣಗಿದ ಬಣ್ಣವನ್ನು ಪ್ರದರ್ಶಿಸುತ್ತಿವೆ. ಕಳೆದ ಮೂರ್ನಾಕು ದಿನಗಳ ಹಿಂದೆಯಷ್ಟೇ ಮೊದಲ ಮಳೆಯ ಸಿಂಚನವಾಗಿದೆ. ಮೊದಲ ಮಳೆಯಲ್ಲಿ ನೆನೆದ ನಂದಿಬೆಟ್ಟದಲ್ಲಿ ನಿಸರ್ಗ ತನ್ನ ರಮಣೀಯತೆಯನ್ನು ಪ್ರದರ್ಶಿಸಿದೆ.

ಮೊದಲ ಮಳೆಗೆ ಅರಳಿ ನಿಂತ ರೋಸ್ ಪಿಂಕ್ ಲಿಲ್ಲಿ ಹೂಗಳಿಂದಾಗಿ ನಂದಿಬೆಟ್ಟವು ಗುಲಾಬಿ ಬಣ್ಣದ ಹೊದಿಕೆಯನ್ನು ಹೊದ್ದ ಹಾಗೆ ಕಂಗೊಳಿಸುತ್ತಿದೆ. ಗುಲಾಬಿ ಬಣ್ಣದ ರೋಸ್ ಪಿಂಕ್ ಲಿಲ್ಲಿ ಹೂಗಳನ್ನು ಮೈಮೇಲೆಲ್ಲಾ ಅರಳಿಸಿಕೊಂಡ ನಂದಿಬೆಟ್ಟ ಒಂದು ಬೃಹತ್ ಹೂಗುಚ್ಛದಂತೆ ಕಂಡುಬರುತ್ತಿದೆ.

ನಂದಿಬೆಟ್ಟಕ್ಕೆ ಹೊಸ ಕಳೆ ಕೊಟ್ಟಿರುವ ಈ ಹೂವಿನ ವೈಜ್ಞಾನಿಕ ಹೆಸರು ಜೆಫೈರಾಂಥಸ್ ಕ್ಯಾರಿನೇಟ. ‘ಜಫೈರೆಸ್’ ಎಂಬುದು ಗ್ರೀಕ್‌ನ ಗಾಳಿ ದೇವತೆಯ ಹೆಸರು. ಆಂಥೋಸ್ (ಗ್ರೀಕ್ ಪದ) ಅಂದರೆ ಹೂವು. ಇವೆರಡೂ ಸೇರಿ ಜೆಫೈರಾಂಥಸ್ ಆಗಿದೆ. 15 ರಿಂದ 30 ಸೆಂ.ಮೀ ಎತ್ತರದ ಕಾಂಡದಲ್ಲಿ ಸುಮಾರು ಮೂರು ಸೆಂ.ಮೀ ವ್ಯಾಸದ ಆರು ದಳಗಳ ಸುಂದರ ಗುಲಾಬಿ ಬಣ್ಣದ ಹೂಗಳು ಅರಳುತ್ತವೆ. ಹೂವಿನೊಳಗಿನಿಂದ ಹಳದಿ ಬಣ್ಣದ ಕೇಸರಗಳು ಹೊರಚಾಚಿದ್ದು ನೋಡಲು ಮೋಹಕವಾಗಿರುತ್ತವೆ.

ಇದರ ಮೂಲ ದಕ್ಷಿಣ ಅಮೆರಿಕ. ಆದರೆ ಹಲವಾರು ವರ್ಷಗಳಿಂದ ನಂದಿಬೆಟ್ಟದ ಸೌಂದರ್ಯವನ್ನು ಈ ಲಿಲ್ಲಿಗಳು ಪ್ರತಿವರ್ಷ ಈ ಸಮಯದಲ್ಲಿ ಇಮ್ಮಡಿಗೊಳಿಸುತ್ತವೆ. ಮೊದಲ ಮಳೆ ಬಿದ್ದೊಡನೆಯೇ ಹೂವನ್ನು ಅರಳಿಸುವುದು ಈ ಲಿಲ್ಲಿಗಳ ವಿಶೇಷ. ಅದಕ್ಕೇ ಇದನ್ನು ರೈನ್ ಲಿಲ್ಲಿ ಎನ್ನುವರು. ಈಗ ಸಾವಿರಾರು ಸಂಖ್ಯೆಯಲ್ಲಿ ಅರಳಿರುವ ಈ ಹೂಗಳು ನಂದಿಬೆಟ್ಟದ ಬಣ್ಣವನ್ನೇ ಬದಲಿಸಿವೆ ಎನ್ನುತ್ತಾರೆ ನಂದಿಬೆಟ್ಟದ ತೋಟಗಾರಿಕಾ ಇಲಾಖೆಯ ವಿಶೇಷ ಅಧಿಕಾರಿ ಎನ್.ಗೋಪಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT