ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ನಿಖಿಲ್‌ಗೆ ಯುಪಿಎಸ್‌ಸಿಯಲ್ಲಿ 563ನೇ ರ‍್ಯಾಂಕ್‌

ಯುಪಿಎಸ್‌ಸಿ: ಭೂಗೋಳವಿಜ್ಞಾನ ವಿಷಯ ತೆಗೆದುಕೊಂಡು ಪಾಸ್‌ ಮಾಡಿದ ಎಂಜಿನಿಯರ್‌!
Last Updated 28 ಏಪ್ರಿಲ್ 2018, 6:08 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ನಿವಾಸಿ, 24 ವರ್ಷದ ನಿಖಿಲ್‌ ಧನರಾಜ್‌ ನಿಪ್ಪಾಣಿಕರ ಯುಪಿಎಸ್‌ಸಿ ಈಚೆಗೆ ನಡೆಸಿದ ಪರೀಕ್ಷೆಯಲ್ಲಿ 563ನೇ ರ‍್ಯಾಂಕ್‌ ಪಡೆದು ಸಾಧನೆ ತೋರಿದ್ದಾರೆ. ಮೊದಲ ಯತ್ನದಲ್ಲೇ ಅವರು ಯಶಸ್ಸು ಕಂಡಿರುವುದು ವಿಶೇಷ.

ದಿವಂಗತ ಧನರಾಜ್‌ ನಿಪ್ಪಾಣಿಕರ–ಮೀನಾಕ್ಷಿ ದಂಪತಿಯ ಪುತ್ರ ಅವರು. ಕ್ಯಾಂಪ್‌ನ ಸೇಂಟ್‌ ಪಾಲ್ಸ್‌ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 86 ರಷ್ಟು ಅಂಕ ಪಡೆದಿದ್ದರು. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾದಲ್ಲಿ ಶೇ 91ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಎನಿಸಿದ್ದರು.

2013ರಲ್ಲಿ ನಡೆದ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ‍ದವಿಯಲ್ಲಿ 3ನೇ ರ‍್ಯಾಂಕ್‌ ಪಡೆದಿದ್ದರು. ಯುಪಿಎಸ್‌ಸಿಯಲ್ಲಿ ಭೂಗೋಳವಿಜ್ಞಾನ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡು ಉತ್ತಮ ಅಂಕ ಗಳಿಸಿದ್ದಾರೆ.

‘ಮೊದಲಿನಿಂದಲೂ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶವಿತ್ತು. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದೆ. ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆಯೇ, 2016ರಲ್ಲಿ ನವದೆಹಲಿಯ ವಾಜಿರಾಂ ಇನ್‌ಸ್ಟಿಟ್ಯೂಟ್‌ ಫಾರ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ಸೇರಿದ್ದೆ. ಆಡಳಿತ ನಡೆಸುವವರಿಗೆ ಭೂಗೋಳವಿಜ್ಞಾನದ ಅರಿವಿರಬೇಕು. ಇದಕ್ಕಾಗಿಯೇ ನಾನು ಆ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದೆ. ಮೊದಲ ಪ್ರಯತ್ನದಲ್ಲೇ ಉತ್ತಮ ರ‍್ಯಾಂಕ್‌ನೊಂದಿಗೆ ಪಾಸ್‌ ಆಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ನಿಖಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷೆಗಾಗಿ ಬಹಳ ಶ್ರಮ ಪಟ್ಟಿದ್ದೆ. 2 ವರ್ಷ ಸಾಮಾಜಿಕ ಜೀವನದಿಂದ ದೂರವೇ ಉಳಿದಿದ್ದೆ. ಓದುವುದೊಂದೇ ಕೆಲಸವಾಗಿತ್ತು. ಬೆಳಗಾವಿಗೂ ಒಮ್ಮೆ ಮಾತ್ರವೇ ಬಂದು ಹೋಗಿದ್ದೆ. ಏ.3ರಂದು ಸಂದರ್ಶನ ಎದುರಿಸಿದ್ದೆ. ಕೆಲವು ದಿನಗಳ ಹಿಂದಷ್ಟೇ ಬೆಳಗಾವಿಗೆ ಬಂದೆ. ಒಳ್ಳೆಯ ಫಲಿತಾಂಶ ಬಂದಿರುವುದರಿಂದ ನನ್ನ ಶ್ರಮ ಸಾರ್ಥಕವಾದಂತಾಗಿದೆ’ ಎಂದು ಹೇಳಿದರು.

‘ತಂದೆ ಧನರಾಜ್‌ 2013ರಲ್ಲಿ ನಿಧನರಾದರು. ತಾಯಿ ಗೃಹಿಣಿ. ನನಗೆ ಚಿಕ್ಕಪ್ಪ ಕಿರಣ್‌ ನಿಪ್ಪಾಣಿಕರ, ಮಾವ ಮಿಲಿಂದ್‌ ಸುಳಗೇಕರ ಹಾಗೂ ಅತ್ತೆ ಲಕ್ಷ್ಮಿ ಸುಳಗೇಕರ ಬಹಳಷ್ಟು ಪ್ರೋತ್ಸಾಹ ಹಾಗೂ ನೆರವು ನೀಡಿದರು. ಯಾವುದೇ ತೊಂದರೆಯಾಗದಂತೆ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರಿಂದ ಸಾಧನೆ ಸಾಧ್ಯವಾಯಿತು. ಓದಿನತ್ತ ಗಮನ ನೀಡುವುದಕ್ಕೆ ಸಹಕಾರಿಯಾಯಿತು’ ಎಂದು ನೆನೆದರು.

‘ಜನ ಸೇವೆ ಮಾಡಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಎನ್ನುವ ಗುರಿ ಇದೆ. ಯಾವ ಹುದ್ದೆ ಸಿಗುತ್ತದೆ ಎನ್ನುವುದನ್ನು ನೋಡಬೇಕು’ ಎಂದು ಅನಿಸಿಕೆ ಹಂಚಿಕೊಂಡರು.

‘ಪುತ್ರನ ಸಾಧನೆ ನೋಡಿ ತುಂಬಾ ಖುಷಿಯಾಗುತ್ತಿದೆ. ಚಿಕ್ಕವನಾಗಿದ್ದಾಗಿನಿಂದಲೂ ಚೆನ್ನಾಗಿ ಓದುತ್ತಾ ಬಂದಿದ್ದಾನೆ. ಈಗ ದೊಡ್ಡ ಅಧಿಕಾರಿಯಾಗುತ್ತಿದ್ದಾನೆ ಎನ್ನುವುದನ್ನು ನೆನೆದರೆ ಹೆಮ್ಮೆಯಾಗುತ್ತದೆ’ ಎಂದು ತಾಯಿ ಮೀನಾಕ್ಷಿ ಸಂತಸ ವ್ಯಕ್ತಪಡಿಸಿದರು.

ನಿಖಿಲ್‌ಗೆ ಅತ್ತೆ, ನಗರಪಾಲಿಕೆ ಎಂಜಿನಿಯರ್‌ ಲಕ್ಷ್ಮಿ ನಿಪ್ಪಾಣಿಕರ ಕುಟುಂಬ ಆಸರೆಯಾಗಿತ್ತು. ‘ನಾವು ಪ್ರೀತಿಯಿಂದ ಸಾಕಿದ ಹುಡುಗನ ಸಾಧನೆ ಕಂಡು ಹೆಮ್ಮೆಯಾಗುತ್ತದೆ. ಖುಷಿ ವರ್ಣಿಸಲು ಪದಗಳು ಸಿಗುತ್ತಿಲ್ಲ. ಚಿಕ್ಕಂದಿನಿಂದಲೂ ಬಹಳ ಬುದ್ಧಿವಂತ ಅವನು. ಮನೆಯವರು ಹಾಗೂ ಶಾಲೆಯ ಕೆಲವೇ ಸ್ನೇಹಿತರೊಂದಿಗೆ ಆಡುತ್ತಿದ್ದ. ಓದಿನತ್ತ ಹೆಚ್ಚಿನ ಗಮನ ಕೊಡುತ್ತಿದ್ದ. ನನಗಿಂತಲೂ ಹೆಚ್ಚಿನದ್ದನ್ನು ಸಾಧಿಸಬೇಕು ಎಂದು ಹೇಳುತ್ತಿದ್ದೆ. ಹಾಗೆಯೇ ಮಾಡಿದ್ದಾನೆ’ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT