ಕಾಲಮಿತಿಯೊಳಗೆ ಜನರ ಸಮಸ್ಯೆ ಬಗೆಹರಿಸಿ: ಅಧಿಕಾರಿಗಳಿಗೆ ಶಿವಯೋಗಿ ಸಿ. ಕಳಸದ ಸೂಚನೆ

7
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಕಾಲಮಿತಿಯೊಳಗೆ ಜನರ ಸಮಸ್ಯೆ ಬಗೆಹರಿಸಿ: ಅಧಿಕಾರಿಗಳಿಗೆ ಶಿವಯೋಗಿ ಸಿ. ಕಳಸದ ಸೂಚನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಪ್ರತಿ ಮಂಗಳವಾರ ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವುಗಳನ್ನು ತ್ವರಿತವಾಗಿ ನಿಗದಿತ ಸಮಯದಲ್ಲಿ ಬಗೆಹರಿಸಿಕೊಡುವ ಕೆಲಸ ಮಾಡಬೇಕು’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಅಧಿಕಾರಿಗಳು ಗ್ರಾಮಸ್ಥರ ಕುಂದು ಕೊರತೆ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಗ್ರಾಮ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಕರ್ಯಗಳ ಪರಿಶೀಲನೆ ನಡೆಸಬೇಕು’ ಎಂದು ಹೇಳಿದರು.

‘ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಬೇಕು. ಸಾಧ್ಯವಾದರೆ ಕುಂದು ಕೊರತೆ ಆಲಿಸಲು ಪೋನ್‍ಇನ್ ಕಾರ್ಯಕ್ರಮ ಸಹ ನಡೆಸಬಹುದು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 30 ಗ್ರಾಮಗಳಿಗೆ 72 ಟ್ಯಾಂಕರ್ ಮತ್ತು 37 ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಎದುರಿಸಲು ಬಿಡುಗಡೆ ಮಾಡಿರುವ ಅನುದಾನವನ್ನು ವ್ಯರ್ಥಮಾಡಬೇಡಿ. ಟ್ಯಾಂಕರ್ ಮೂಲಕ ಸರಬರಾಜು ಮಾಡುವವರಿಗೆ ಸಕಾಲಕ್ಕೆ ಬಿಲ್ ಪಾವತಿ ಮಾಡಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ’ ಎಂದರು.

‘ಜಿಲ್ಲೆಯಲ್ಲಿ ಶಾಲಾ ಕೊಠಡಿಗಳಿಗೆ ಹಾಗೂ ಹಾಸ್ಟೆಲ್‌ಗಳಿಗೆ ಜಾಗದ ಕೊರತೆ ಇದ್ದರೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಅವರು ಅದಕ್ಕಾಗಿ ಜಾಗ ಗುರುತಿಸಿಕೊಡುವ ಕೆಲಸ ಮಾಡಬೇಕು. ಚಿಕ್ಕಬಳ್ಳಾಪುರ ನಗರದಲ್ಲಿ ಹಾಸ್ಟೆಲ್‌ಗಳಿಗೆ ಜಾಗದ ಕೊರತೆ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತಹಶೀಲ್ದಾರ್ ಕ್ರಮಕೈಗೊಂಡು ಶೀಘ್ರದಲ್ಲಿಯೇ ಜಾಗ ಒದಗಿಸಬೇಕು’ ಎಂದು ಸೂಚಿಸಿದರು.

‘ಆಮ್ ಆದ್ಮಿ ಭೀಮಾ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ಅರ್ಜಿ ಬಂದಿಲ್ಲ. ಆದ್ದರಿಂದ ಈ ಯೋಜನೆಗೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕು. ಜಮಾಬಂದಿ ಹಾಗೂ ಪೋಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಗ್ರೇಡ್ 1 ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಮುಜರಾಯಿ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಉಪ ವಿಭಾಗಾಧಿಕಾರಿ ಶಿವಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !