ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಮತ್ತೊಮ್ಮೆ ನಿಯೋಗ

Last Updated 21 ಮೇ 2011, 8:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶಾಸ್ತ್ರೀಯ ಭಾಷೆ ಕನ್ನಡಕ್ಕೆ ಸಿಗಬೇಕಾದ ಆರ್ಥಿಕ ಸವಲತ್ತನ್ನು ಯಾವುದೇ ತಕರಾರು ಇಲ್ಲದೆ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸದ್ಯದಲ್ಲೇ ಮತ್ತೊಮ್ಮೆ ದೆಹಲಿಗೆ ನಿಯೋಗ ಕರೆದೊಯ್ಯಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಮೂರು ದಿನ ನಡೆಯುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಸಿಕ್ಕಿದರೂ ರಾಜಕೀಯ ಪಿತೂರಿಯಿಂದಾಗಿ ಹಣಕಾಸು ನೆರವು ಸಿಕ್ಕಿಲ್ಲ.2010-11ರ ರೂ. 2.40 ಕೋಟಿ, ಪ್ರಸಕ್ತ ಸಾಲಿನ ರೂ. 17.55 ಕೋಟಿ ಹಾಗೂ 12ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗಬೇಕಿರುವ ಅನುದಾನ ಇನ್ನೂ ಸಿಕ್ಕಿಲ್ಲ. ರಾಜ್ಯದ ಕೋರಿಕೆಗೆ ಬಿಡುಗಡೆ ಮಾಡಿದ್ದ ರೂ.62 ಲಕ್ಷ ಅನುದಾನವನ್ನು ನಾವು ಹೇಳುವವರೆಗೂ ವೆಚ್ಚ ಮಾಡಬಾರದೆಂದು ಕೇಂದ್ರದ ಸಚಿವರು ಮೌಖಿಕ ಸೂಚನೆ ನೀಡಿದ್ದಾರೆ ಎಂದು ಚಂದ್ರು ವಿಷಾದಿಸಿದರು.

‘ಕೇಂದ್ರದೊಂದಿಗೆ ಜಗಳ, ಜಟಾಪಟಿ ನಡೆಸಲು ನಿಯೋಗ ಹೋಗುತ್ತಿಲ್ಲ. ರಾಜ್ಯದ ಭಾಷೆಯ ಅಭಿವೃದ್ಧಿಗೆ ಮತ್ತು ಶಾಸ್ತ್ರೀಯ ಭಾಷೆಗೆ ಸಿಗಬೇಕಾದ ಸವಲತ್ತು ದೊರಕಿಸಿಕೊಡಲು ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಎಂ,ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಮೌನಮುರಿಯಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

‘ಚಿಕ್ಕಮಗಳೂರು ಜಿಲ್ಲೆ ಹೊರಗಿನಿಂದ ಬಂದವರ ಆಕ್ರಮಣಕ್ಕೆ ತುತ್ತಾಗುತ್ತಿದೆ. ಈ ಹಿಂದೆ ಯೂರೋಪಿಯನ್ನರು ಕಾಫಿ ತೋಟ ಕೊಂಡು ನೆಲೆಯೂರಿದರು. ಇದೀಗ ನೆರೆಹೊರೆಯ ರಾಜ್ಯದವರು ಇಲ್ಲಿಯ ಫಲವತ್ತಾದ ನೆಲ ಹಾಗೂ ಆದಾಯ ಮೂಲ ಆಕ್ರಮಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರು ಕಾಫಿ ತೋಟ, ಜಮೀನನ್ನು ಬಂಡವಾಳಶಾಹಿಗಳಿಗೆ ಮಾರಿಕೊಳ್ಳುತ್ತಿದ್ದಾರೆ.

ಕಾಡಿನ ಬೆಲೆಬಾಳುವ ಮರಗಳೆಲ್ಲವೂ ನಶಿಸಿ, ವನಸಂಪತ್ತು ಬರಿದಾಗುತ್ತಿದೆ. ಶುಂಠಿ, ರಬ್ಬರ್ ಬೆಳೆದು ಫಲವತ್ತಾದ ಭೂಮಿಯನ್ನು ನಿಸಾರಗೊಳಿಸುತ್ತಿದ್ದಾರೆ. ಇನ್ನಾದರೂ ಸ್ಥಳೀಯರು ಎಚ್ಚರಿಕೆ ವಹಿಸಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಮಂಜಪ್ಪಶೆಟ್ಟಿ ಮಸಗಲಿ ಎಚ್ಚರಿಸಿದರು.

ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲತಾ ಮಂಜುನಾಥ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಚಂದ್ರಪ್ಪ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT