ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕೆ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಕಾಡಾನೆಯೊಂದು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಹಾನಿ ನಡೆಸಿದೆ.
ನಸುಕಿನಲ್ಲಿ ಮಳೆ ಸುರಿಯುತ್ತಿದ್ದ ವೇಳೆ ಭೈರಾಪುರ ಅರಣ್ಯ ಪ್ರದೇಶದಿಂದ ಹೇರಿಕೆ ಗ್ರಾಮಕ್ಕೆ ಬಂದ ಕಾಡಾನೆಯು, ಗ್ರಾಮದ ಮಹೇಶ್ ಎಂಬುವವರ ಮನೆಯ ಪಕ್ಕದಲ್ಲಿದ್ದ ಶೆಡ್ಡ ಮೇಲೆ ದಾಳಿ ಮಾಡಿ ಶೆಡ್ಡಿನ ಶೀಟುಗಳನ್ನು ಹಾನಿಗೊಳಿಸಿದೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿ ಮಾಡಿದ್ದು, ಮನೆಯ ಸುತ್ತ ತಿರುಗಾಡಿ ಕಾಫಿಗಿಡಗಳನ್ನು ಧ್ವಂಸಗೊಳಿಸಿದೆ. ತಕ್ಷಣವೇ ಆನೆ ಕಾರ್ಯಪಡೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಆನೆ ಕಾರ್ಯಪಡೆ ಸಿಬ್ಬಂದಿ ಮಳೆಯ ನಡುವೆಯೇ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಿದ್ದಾರೆ.
ಹೆಚ್ಚಿದ ಕಾಡಾನೆ ಹಾವಳಿ: ಊರುಬಗೆ ಭಾಗದಲ್ಲಿ ಕೆಲವು ದಿನಗಳಿಂದ ನಾಲ್ಕು ಕಾಡಾನೆಗಳು ಸತತವಾಗಿ ಗ್ರಾಮದೊಳಗೆ ದಾಳಿಯಿಡುತ್ತಿವೆ. ಹಗಲು ರಾತ್ರಿಯೆನ್ನದೇ ರಸ್ತೆಯಲ್ಲಿ, ಕಾಫಿ ತೋಟದಲ್ಲಿ ಓಡಾಡುತ್ತಿವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ದಾಳಿಯನ್ನು ನಿಯಂತ್ರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದು, ಕಾಡಾನೆ ದಾಳಿಯಿಂದ ಹಾನಿಗೊಳಗಾಗಿರುವ ಮಹೇಶ್ ಕುಟುಂಬಕ್ಕೆ ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕುಂದೂರು ಗ್ರಾಮದಲ್ಲೂ ಕಾಡಾನೆ ದಾಳಿ ಮುಂದುವರಿದಿದೆ. ಬುಧವಾರ ನಸುಕಿನಲ್ಲಿ ಬಿ.ಸಿ ರಸ್ತೆ ಬಳಿ ಕಾಣಿಸಿಕೊಂಡಿರುವ ಮೂರು ಕಾಡಾನೆಗಳು ಹೆಬ್ಬಳಗದ್ದೆ ಗ್ರಾಮಕ್ಕೆ ದಾಳಿ ನಡೆಸಿ ಕಾಫಿ, ಅಡಿಕೆ ಬೆಳೆಗಳನ್ನು ನಾಶಗೊಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.