ಶುಕ್ರವಾರ, ನವೆಂಬರ್ 15, 2019
24 °C

ದಶಮಾನೋತ್ಸವದಲ್ಲಿ ಸಂಭ್ರಮಿಸಿದ ತುಳುಕೂಟ

Published:
Updated:
Prajavani

ಮೂಡಿಗೆರೆ ತಾಲ್ಲೂಕು ಹಲವು ವಿಭಿನ್ನತೆಗಳಿಗೆ ಸಾಕ್ಷಿಯಾದ ಕ್ಷೇತ್ರ. ಐತಿಹಾಸಿಕವಾಗಿ ಹೊಯ್ಸಳ ಸಾಮ್ರಾಜ್ಯ ಜನ್ಮ ಪಡೆದ ಮಲೆನಾಡಿನ ಈ ಮಡಿಲಿನಲ್ಲಿ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಸಾನ್ನಿಧ್ಯವು ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರನ್ನು ಕೈ ಬೀಸಿ ಕರೆಯುವ ಪುಣ್ಯ ಕ್ಷೇತ್ರ ಎಂಬುದು ತಾಲ್ಲೂಕಿನ ವೈಶಿಷ್ಟತೆಯ ಮುಡಿಗೆ ಹಿರಿಮೆಯಾಗಿದೆ.

ಈ ತಾಲ್ಲೂಕಿನಲ್ಲಿ ಹಲವು ಸಂಘಟನೆಗಳು ಜನ್ಮ ಪಡೆದು ವಿವಿಧ ದಿಕ್ಕುಗಳಲ್ಲಿ ಜನಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಸಾಧನೆ ಮಾಡುತ್ತಿವೆ. ಇಂತಹ ಸಂಘಟನೆಗಳಲ್ಲಿ ಸೌಹಾರ್ದತೆಗೆ ಹೆಸರಾಗಿರುವ ‘ತುಳುಕೂಟ’ವು ಮೂರು ದಿನಗಳ ಹಿಂದೆ ದಶಮಾನೋತ್ಸವ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಮಾದರಿ ಸಂಘಟನೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

ಕರಾವಳಿಯೊಂದಿಗೆ ನಂಟಿರುವ ಮೂಡಿಗೆರೆ ತಾಲ್ಲೂಕು ಅಪ್ಪಟ ಮಲೆನಾಡಾದರೂ, ಎತ್ತ ನೋಡಿದರೂ ತುಳು ಭಾಷಿಕರು ಕಂಡು ಬರುತ್ತಾರೆ. ಈ ತುಳು ಭಾಷಿಕರನ್ನೆಲ್ಲಾ ಒಂದು ವೇದಿಕೆಗೆ ಕರೆ ತರಬೇಕು ಎಂಬ ನಿಟ್ಟಿನಲ್ಲಿ ಹತ್ತು ವರ್ಷಗಳ ಹಿಂದೆ ‘ಮೂಡಿಗೆರೆ ತಾಲ್ಲೂಕು ತುಳುಕೂಟ’ ವನ್ನು ಸ್ಥಾಪಿಸಲಾಗಿದ್ದು, ದಶಕದಿಂದಲೂ ವಿಭಿನ್ನ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಮೂಲಕ ಭಾಷೆಯ ನೆಲೆಗಟ್ಟಿನಲ್ಲಿ ಸೌಹಾರ್ದತೆಯ ಬೆಸುಗೆಯನ್ನು ಗಟ್ಟಿಗೊಳಿಸಿದೆ.

ತುಳುಕೂಟದಲ್ಲಿ ತುಳು ಭಾಷೆ ಮಾತನಾಡುವ ಎಲ್ಲಾ ಧರ್ಮದ, ಎಲ್ಲಾ ವರ್ಗದ ಜನರು ಸೇರಿದ್ದು, ಪ್ರತಿ ವರ್ಷವೂ ಎಲ್ಲಾ ಧರ್ಮದವರಿಗೆ, ಎಲ್ಲಾ ವರ್ಗದವರಿಗೆ ಆದ್ಯತೆಯ ಅಡಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಕಲ್ಪಿಸುವ ಮೂಲಕ, ಜನರನ್ನು ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಬೆಸೆಯಲು ಭಾಷೆಗಿಂತಲೂ ಮಿಗಿಲಾದ ಸಾಧನವಿಲ್ಲ ಎಂಬುದನ್ನು ಸಾಕ್ಷಿಕರಿಸಲಾಗಿದೆ.

ಈ ತುಳುಕೂಟದಿಂದ ಪ್ರತಿ ವರ್ಷವೂ ‘ಆಟಿಡೊಂಜಿ ದಿನ’, ‘ತುಳು ನಾಟಕ’, ‘ಕೋಳಿ ಅಂಕ’ ಸೇರಿದಂತೆ ತುಳುನಾಡಿನಲ್ಲಿ ಆಚರಿಸುವ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿ, ಮಲೆನಾಡಿನಲ್ಲಿ ತುಳುನಾಡಿನ ಸಂಪ್ರದಾಯವನ್ನು ಮುಂದುವರೆಸುವ ಕಾರ್ಯವನ್ನು ಸದ್ದಿಲ್ಲದೇ ನಡೆಸಲಾಗುತ್ತಿದೆ.

ಈ ಬಾರಿ ಅಶೋಕ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ದಶಮಾನೋತ್ಸವವನ್ನು ಸಮಾಜಮುಖಿ ಚಟುವಟಿಕೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಂಭ್ರಮಿಸಲಾಯಿತು. ತಾಲ್ಲೂಕಿನ ವಿವಿಧ ಗಣ್ಯರ ಸಮ್ಮುಖದಲ್ಲಿ ತುಳು ಸಂಸ್ಕೃತಿಯನ್ನು ಪರಿಚಯಿಸುವ ‘ತುಡರ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹಲವು ತುಳುಭಾಷಿಕರು ಕೋಳಿ ಅಂಕದಿಂದ ಮಧುವಣಗಿತ್ತಿಯವರೆಗೂ ಬರೆದಿರುವ ವಿವಿಧ ಲೇಖನಗಳ ಸಮಾಗಮವಿದ್ದು, ತುಳು ಸಂಸ್ಕೃತಿಯನ್ನು ಅರಿಯಲು ಹಾಗೂ ಮುಂದಿನ ಪೀಳಿಗೆಗೆ ರವಾನಿಸಲು ‘ತುಡರ್’ ಪುಸ್ತಕವು ಮಹತ್ವದ ಹಾದಿಯಾಗಿದೆ.

ದಶಮಾನೋತ್ಸವದಲ್ಲಿ ಮನೋರಂಜನೆಯನ್ನು ಉಣಬಡಿಸಲು ಮಂಗಳೂರಿನ ಐಸಿರಿ ಕಲಾತಂಡದಿಂದ ‘ಗಿರಿಗಿಟ್ ಗಿರಿಧರ್’ ಎಂಬ ನಾಟಕವನ್ನು ಪ್ರದರ್ಶಿಸಲಾಗಿದ್ದು, ಈ ಕಲಾತಂಡವು ಸಮಾಜದ ಸ್ಥಿತ್ಯಂತರವನ್ನು ಮನೋಜ್ಞವಾಗಿ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.

ಮಾದರಿಯಾದ ಸೇವಾಂಜಲಿ

ಮೂಡಿಗೆರೆ ಪಟ್ಟಣವು ಸುಮಾರು ಎರಡೂವರೆ ಕಿ.ಮೀ. ಸುತ್ತಳತೆಯನ್ನು ಹೊಂದಿರುವ ನಗರವಾಗಿದ್ದು, ಪಟ್ಟಣದ ಯಾವುದೇ ಭಾಗದಲ್ಲಿ ಸಾವುಂಟಾದರೂ, ಅಂತ್ಯಸಂಸ್ಕಾರಕ್ಕಾಗಿ ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಬೀಜುವಳ್ಳಿ ಶವಾಗಾರಕ್ಕೆ ಶವವನ್ನು ಹೊತ್ತು ಸಾಗಿಸಬೇಕಿತ್ತು.

ಶ್ರೀಮಂತ ವರ್ಗದವರು ಆಂಬ್ಯುಲೆನ್ಸ್ ಮೂಲಕ ಶವವನ್ನು ಸಾಗಿಸಿದರೆ, ಬಡವರ್ಗದವರಿಗೆ ಶವ ಸಾಗಿಸಲು ಹೆಗಲೇ ಗತಿಯಾಗುತ್ತಿತ್ತು. ಮಳೆಗಾಲದಲ್ಲಂತೂ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸುವುದು ಬದುಕಿದ್ದವರೂ ನರಕ ಕಾಣುವಂತೆ ಮಾಡುತಿತ್ತು. ಕೆಲವರು ಶವದ ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಿಡಿದು ಶವ ಸಾಗಿಸಿದ ಘಟನೆಗಳೂ ನಡೆದಿರುವುದುಂಟು. ಇಂತಹ ಪರಿಸ್ಥಿತಿಯನ್ನು ಅರಿತ ತುಳುಕೂಟವು ಅಂತ್ಯಸಂಸ್ಕಾರಕ್ಕಾಗಿ ಶವ ಸಾಗಿಸಲು ಸುಮಾರು ₹ 3 ಲಕ್ಷ ವೆಚ್ಚದಲ್ಲಿ ಸೇವಾಂಜಲಿ ಎಂಬ ಸುಸಜ್ಜಿತ ವಾಹನವನ್ನು ದಶಮಾನೋತ್ಸವದ ನೆನಪಿನಲ್ಲಿ ಪಟ್ಟಣದ ಜನತೆಗೆ ಕೊಡುಗೆಯಾಗಿ ನೀಡಿದ್ದು, ಇದನ್ನು ಸಂಪೂರ್ಣ ಉಚಿತವಾಗಿ ಬಳಸಲು ಅವಕಾಶ ಕಲ್ಪಿಸುವ ಮೂಲಕ ಅಂತ್ಯಸಂಸ್ಕಾರದ ಹಾದಿಯನ್ನು ಸುಗಮಗೊಳಿಸಿರುವುದು ಸಾರ್ವಜನಿಕ ಕ್ಷೇತ್ರದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಭಾಷೆಯೊಂದು ಮಾನವನನ್ನು ಭಾವನಾತ್ಮಕವಾಗಿ ಬೆಸೆಯಬಲ್ಲದು ಎಂಬುದಕ್ಕೆ ತುಳುಕೂಟವು ಸಾಕ್ಷಿಯಾಗಿದ್ದು, ಈ ತುಳುಕೂಟದಿಂದ ಸೌಹಾರ್ದತೆಯ ನೆಲೆಯಲ್ಲಿ ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳು ಹೊರಹೊಮ್ಮಲಿ ಎಂಬುದು ಜನರ ಆಶಯವಾಗಿದೆ.

ಪ್ರತಿಕ್ರಿಯಿಸಿ (+)