ಶುಕ್ರವಾರ, ಜನವರಿ 24, 2020
18 °C

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಅಂಗೀಕಾರ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಪಾಲನೆಗೆ ಇದೇ 22ರಂದು ಬೆಳಿಗ್ಗೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

18ರಂದು ಸಂಜೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದೊಣ್ಣೆ, ಕತ್ತಿ, ಬಂದೂಕು, ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಒಯ್ಯುವುದು, ಬಳಸುವುದು, ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆ, ವಿಜಯೋತ್ಸವ, ಮೆರವಣಿಗೆ, ಸಭೆ-ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

ಪ್ರತಿಕೃತಿಗಳ ಪ್ರದರ್ಶನ ನಿಷೇಧಿಸಲಾಗಿದೆ. ಶಾಂತಿ– ಸುವ್ಯವಸ್ಥೆಗೆ ಭಾದೆಯುಂಟು ಮಾಡುವ, ಪ್ರಚೋದನಾಕಾರಿ ಘೋಷಣೆ, ಹಾಡು, ಸಂಗೀತ, ಆವೇಶ ಭರಿತ ಭಾಷಣ, ಪ್ರದರ್ಶನ, ಪ್ರಸಾರ ನಿರ್ಬಂಧಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆಯು ಮದುವೆ, ಗೃಹ ಪ್ರವೇಶ ಇತರ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಈ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬಿಗಿ ಭದ್ರತೆ: ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಆಯಕಟ್ಟಿನ ಸ್ಥಳಗಳು ಸಹಿತ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಗಸ್ತಿನಲ್ಲಿದ್ದು, ಎಲ್ಲ ಕಡೆ ನಿಗಾ ವಹಿಸಲಾಗಿದೆ.

ಬಾಕ್ಸ್‌

ಚಳವಳಿಗೆ ತಡೆ; ಖಂಡನೆ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಚಳವಳಿಗೆ ಮುಂದಾದ ಸಿಪಿಐ, ಸಿಪಿಐಎಂಎಲ್‌ ಪದಾಧಿಕಾರಿಗಳನ್ನು ಪೊಲೀಸರು ತಡೆದರು.

ನಗರದ ಸಂತೆ ಮೈದಾನದ ಬಳಿಯ ಸಿಪಿಐ ಕಚೇರಿಯಿಂದ ಹೊರಡಲು ಪದಾಧಿಕಾರಿಗಳು ಮುಂದಾದರು. ಆದರೆ, ಪೊಲೀಸರು ಅವರನ್ನು ಬಾಗಲ ಬಳಿಯೇ ತಡೆದರು. ಕಚೇರಿ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶ ಇಲ್ಲ. ಕಾನೂನು ಪಾಲನೆ ಮಾಡಿ’ ಎಂದು ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಲೀಂ ಅಬ್ಬಾಸ್‌ ಅವರು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಪದಾಧಿಕಾರಿಗಳು ಸರ್ಕಾರದ ನಿಲುವಿಗೆ ಖಂಡನೆ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ಎಚ್‌.ಎಂ.ರೇಣುಕಾರಾಧ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಸಿಪಿಐ, ಸಿಪಿಐಎಂಎಲ್‌, ಫಾವರ್ಡ್‌ ಬ್ಲಾಕ್‌ ಎಡಪಕ್ಷಗಳು ಚಳವಳಿಗೆ ಕರೆ ಕೊಟ್ಟಿದ್ದವು. ಪಕ್ಷದ ಜಿಲ್ಲಾ ಮುಖಂಡರಷ್ಟೇ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆವು, ಅದಕ್ಕೂ ಅವಕಾಶ ನೀಡಿಲ್ಲ’ ಎಂದು ದೂಷಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಇವೆಲ್ಲವೂ ಗಂಭೀರ ವಿಷಯಗಳು. ಬಿಜೆಪಿ ಸರ್ಕಾರವು ಚರ್ಚೆಗೆ ಅವಕಾಶ ನೀಡದೆ ಅಂಗೀಕರಿಸಿದೆ. ಬಹುಮತವನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ದೂರಿದರು.

‘ದೇಶ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಭಿನ್ನಭಾವ ಮಾಡಿದರೆ ದೇಶದಲ್ಲಿ ನೆಮ್ಮದಿ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧ ಮಾಡುತ್ತಿದ್ದೇವೆ’ ಎಂದರು.

ಮುಖಂಡರಾದ ರಾಧಾಸುಂದರೇಶ್‌ ಮಾತನಾಡಿ, ‘ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ಸರ್ಕಾರ ತಿಳಿದುಕೊಳ್ಳಬೇಕು’ ಎಂದರು.

ಮುಖಂಡರಾದ ಬಿ.ಅಮ್ಜದ್‌, ಗುಣಶೇಖರ್‌, ಎಸ್.ವಿಜಯ್‌, ರಘು, ತನ್ವೀರ್‌, ವಿಜಯಕುಮಾರ್‌, ಲೋಬೊ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು