ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ನೇ ಶತಮಾನ ಗಾಂಧೀಜಿ ಯುಗ

ಕನ್ನಡ ಸಾಹಿತ್ಯ ಪರಿಷತ್‌: ದತ್ತಿ ಉಪನ್ಯಾಸದಲ್ಲಿ ಮಾಜಿ ಶಾಸಕ ವೈ.ಎಸ್‌.ವಿ. ದತ್ತ
Last Updated 18 ಜನವರಿ 2021, 2:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಗಾಂಧೀಜಿ ಬಹಳ ಸರಳ ವ್ಯಕ್ತಿಯಾಗಿದ್ದರು. ಜೀವನ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಸರಳತೆಯ ಮೌಲ್ಯ ಅಳವಡಿಸಿಕೊಂಡರೆ ಶೇ 90ರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಗರದ ಬಸವ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ದಿವಂಗತ ಡಿ.ಎಸ್‌ ಕೃಷ್ಣಪ್ಪ ಗೌಡ ಮತ್ತು ದಿವಂಗತ ಎಂ.ಎಂ ಬಸವೇಗೌಡ ಅವರ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು. ‘ಗಾಂಧೀಜಿ ಅವರ ಬಗ್ಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಗ್ರಂಥಗಳು ಪ್ರಕಟವಾಗಿವೆ. 20ನೇ ಶತಮಾನವವನ್ನು ಗಾಂಧೀಜಿ ಯುಗ ಎಂದು ಜಗತ್ತು ಕರೆಯುತ್ತದೆ’ ಎಂದು ವಿಶ್ಲೇಷಿಸಿದರು.

ಕನ್ನಡದ ಸಾಹಿತಿಗಳು, ಕವಿಗಳು ಬರಹದ ಮೂಲಕ ಗಾಂಧೀಜಿ ಅವರನ್ನು ಜನರಿಗೆ ಹೇಗೆ ಮುಟ್ಟಿಸಿದರು ಎಂಬ ಬಗ್ಗೆ ವಿವರಿಸಿದರು. ನವೋದಯ, ಗಾಂಧೀಜಿ ಹತ್ಯೆ, ಗಾಂಧೀಜಿ ನಂತರದ ಕಾಲಘಟ್ಟಗಳಲ್ಲಿ ಅವರ ಕುರಿತು ಕನ್ನಡ ಸಾರಸ್ವತ ಲೋಕದ ದಿಗ್ಗಜರು ರಚಿಸಿರುವ ಸಾಹಿತ್ಯವನ್ನು ತೆರೆದಿಟ್ಟರು.

‘ಗಾಂಧೀಜಿ ಮನಸ್ಸು ಕಡಲಿನಾಳದ್ದು, ಅವರ ಆತ್ಮ ಹಿಮಗಿರಿ ಮೀರಿದ್ದು...’ ಎಂದು ಟಿ.ಪಿ.ಕೈಲಾಸಂ ವರ್ಣಿಸಿದ್ದಾರೆ. ‘ದೇವರ ಮಾರ್ಗವನ್ನು ತೋರಿಸಿಕೊಟ್ಟವರು ಗಾಂಧೀಜಿ..’ ಎಂದು ಡಿ.ವಿ.ಗುಂಡಪ್ಪ ಬಣ್ಣಿಸಿದ್ದಾರೆ. ಬುದ್ಧ, ಬಸವಣ್ಣ, ಕ್ರಿಸ್ತರ ಜೊತೆ ಗಾಂಧೀಜಿ ಅವರನ್ನು ಚೆನ್ನವೀರ ಕಣವಿ ಸಮೀಕರಿಸಿದ್ದಾರೆ ಎಂದು ಹೇಳಿದರು.

‘ಗಾಂಧೀಜಿ ಹತ್ಯೆ ನಡೆದಾಗ’ಹಿಂಸೆ ಅಹಿಂಸೆಯನ್ನು ಗುಂಡು ಹಾಕಿ ಕೊಂದಿತೋ’ ಎಂದು ದ.ರಾ.ಬೇಂದ್ರೆ ಬರೆದಿದ್ದರು. ‘ರಾಷ್ಟ್ರಪಿತ ದಿವಂಗತ, ಉನ್ಮತ್ತ ಹಸ್ತಹತ, ನರಹೃದಯದ ವಿಷ ವಾರಿಧಿಗೆ ಜೀವಾಮೃತ ಸಮರ್ಪಿತ, ಕ್ಷಮಿಸು ಓ ಜಗತ್‌ ಪಿತ, ಅದೃಷಹೀನ ಭಾರತ’ ಎಂದು ಕುವೆಂಪು ಹೇಳಿದ್ದರು’ ಎಂದರು.

‘ಬೀದಿಬೀದಿಗೆ ನಿಮ್ಮ ಹೆಸರಿಡು ವುದು ಸುಲಭ, ನಿಮ್ಮಂತೆ ಬದುಕು ವುದು ದುರ್ಲಭ’ ಎಂದು ಕೆ.ಎಸ್‌.ನರಸಿಂಹಸ್ವಾಮಿ ಹೇಳಿದ್ದಾರೆ. ‘ಗಾಂಧೀಜಿ ಕುರಿತ ಬರಹಗಳನ್ನು ಓದಬೇಕು, ಅವರನ್ನು ಅರ್ಥೈಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ಧಾರ್ಥ ಮಾತನಾಡಿ, ಡಿ.ಎಸ್‌.ಕೃಷ್ಣೇಗೌಡ, ಎ.ಎಂ.ಬಸವೇಗೌಡ ಅವರ ಬದುಕನ್ನು ಸ್ಮರಿಸಿದರು. ಗಾಂಧೀಜಿ ತತ್ವಸಿದ್ಧಾಂತ ಸಾರ್ವಕಾಲಿಕ ಪ್ರಸ್ತುತ’ ಎಂದರು.

ಬಸವ ಮಂದಿರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕುಂದೂರು ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಗೌರವ ಕೋಶಾಧ್ಯಕ್ಷ ಪ್ರೊ.ಕೆ.ಎನ್‌.ಲಕ್ಷ್ಮಿಕಾಂತ್‌, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT