ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ 291 ಅಂಗನಾಡಿಗಳಿಗೆ ಸ್ವಂತ ಕಟ್ಟಡವಿಲ್ಲ

Last Updated 23 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಟ್ಟು 1,825 ಅಂಗನಾಡಿ ಕೇಂದ್ರಗಳು ಇದ್ದು, ಈ ಪೈಕಿ 291ಅಂಗನಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಮೂಲಸೌಕರ್ಯಗಳ ಕೊರತೆಯಿಂದ ಕೆಲವು ಕೇಂದ್ರಗಳು ನಲುಗಿವೆ.

ಸ್ವಂತ ಕಟ್ಟಡ ಇಲ್ಲದಿರುವ ಅಂಗನಾಡಿಗಳು ಪಟ್ಟಣ, ನಗರ ಪ್ರದೇಶಗಳಲ್ಲಿ ಹೆಚ್ಚು ಇವೆ. ಕಡೂರು ತಾಲ್ಲೂಕಿನಲ್ಲಿ ಒಟ್ಟು 117 ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಮನೆಗಳನ್ನು ಬಾಡಿಗೆಗೆ ಪಡೆದು ಅಂಗನವಾಡಿ ನಡೆಸಲಾಗುತ್ತಿದೆ. ಈ ಕಟ್ಟಡಗಳಲ್ಲಿ ವಿಶಾಲ ಕೋಣೆ, ಅಂಗಳ ಮೊದಲಾದ ಮೂಲಸೌಕರ್ಯಗಳೇ ಇಲ್ಲ.

1,138ಅಂಗನವಾಡಿಗಳಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲ, 535ರಲ್ಲಿ ನೀರಿನ ಸೌಕರ್ಯ ಇಲ್ಲ, 292ರಲ್ಲಿ ಶೌಚಾಲಯ ಇಲ್ಲ ಹಾಗೂ 320ರಲ್ಲಿ ಅಡುಗೆ ಕೋಣೆಗಳು ಇಲ್ಲ. ಸಮಸ್ಯೆಗಳ ನಡುವೆಯೇ ಕೇಂದ್ರಗಳನ್ನು ಕಾರ್ಯಕರ್ತೆಯರು, ಸಹಾಯಕಿಯರು ನಿಭಾಯಿಸುವ ಅನಿವಾರ್ಯ ಇದೆ.

291 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ 175 ನಿವೇಶನ ಒದಗಿಸಲಾಗಿದೆ. ಇನ್ನು 116 ನಿವೇಶನ ಒದಗಿಸುವುದು ಬಾಕಿ ಇದೆ. ಈ ಪೈಕಿ ನಗರ ಪ್ರದೇಶಗಳಲ್ಲಿ 67 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 49 ಕಡೆ ನಿವೇಶನ ಕಲ್ಪಿಸಬೇಕಿದೆ.

‘ಕೆಲವು ಕಡೆ ಅನಿವಾರ್ಯವಾಗಿ ಬಾಡಿಗೆ ಕಟ್ಟಡ ಅವಲಂಬಿಸಬೇಕಾಗಿದೆ. ನಗರ, ಪಟ್ಟಣಗಳಲ್ಲಿ ಮಾಸಿಕ ಮೂರ್ನಾಲ್ಕು ಸಾವಿರ ಬಾಡಿಗೆಗೆ ಸಕಲ ಸೌಕರ್ಯ ಇರುವ ಕಟ್ಟಡಗಳು ಸಿಗುವುದು ಕಷ್ಟ. ಕಟ್ಟಡ ಮಾಲೀಕರು ಮುಂಗಡಕ್ಕೆ (ಅಡ್ವಾನ್ಸ್‌) ಬೇಡಿಕೆ ಇಡುತ್ತಾರೆ. ಇಲಾಖೆ ಬಡ್ಜೆಟ್‌ ಲೆಕ್ಕಕ್ಕೆ ಹೊಂದುವ ಮನೆಯನ್ನು ಬಾಡಿಗೆ ಪಡೆದು ಅದರಲ್ಲಿಯೇ ಹೊಂದಾಯಿಸಿಕೊಂಡು ನಿಭಾಯಿಸುತ್ತಿದ್ದೇವೆ’ ಎಂದು ಅಂಗನವಾಡಿ ಮೇಲ್ವಿಚಾರಕಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗಳ, ವರಾಂಡ, ವಿಶಾಲ ಕೋಣೆ, ಉಗ್ರಾಣ ಕೊಠಡಿ, ನೀರು, ವಿದ್ಯುತ್‌ ಮೊದಲಾದ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರ ಒಳಗೊಂಡಿರಬೇಕು. ಸ್ವಂತಕಟ್ಟಡ ಇರುವ ಕಡೆ ಇದು ಓಕೆ. ಬಾಡಿಗೆ, ಖಾಸಗಿ ಕಟ್ಟಡಗಳಲ್ಲಿ ‘ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ’ ಪಾಲಿಸಲೇಬೇಕಾಗುತ್ತದೆ. ಕಲ್ದೊಡ್ಡಿಯಂಥ ಬಡವಾಣೆಯ ಕೇಂದ್ರಗಳಲ್ಲಿ ನೀರಿನ ಸೌಕರ್ಯ ಇಲ್ಲ. ಕೆಲವು ಕಡೆ ವಿದ್ಯುತ್‌ ಇಲ್ಲ’ ಎಂದು ಬಾಡಿಗೆ ಕಟ್ಟಡದಲ್ಲಿ ಕೇಂದ್ರ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

‘ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ಇದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ಮಕ್ಕಳನ್ನು ಕೇಂದ್ರದಲ್ಲಿ ಇಟ್ಟುಕೊಳ್ಳುತ್ತಾರೆ. ಸುಮಾರು 30 ಮಕ್ಕಳು ಈ ಕೇಂದ್ರಕ್ಕೆ ಬರುತ್ತವೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಾರೆ’ ಎಂದು ರಾಜೀವ್‌ಗಾಂಧಿ ಬಡಾವಣೆ ನಿವಾಸಿ ಕಮಲಮ್ಮ ತಿಳಿಸಿದರು.

ಖಾಸಗಿ ಕಟ್ಟಡ, ಮನೆಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಚಿಣ್ಣರ ಕಲಿಕೆಗೆ ಪೂರಕವಾದ ವಾತಾವರಣದ ಕೊರತೆಯೂ ಇದೆ. ಕೆಲ ಕೇಂದ್ರಗಳಲ್ಲಿ ಕಟ್ಟಡದಲ್ಲಿ ಗಾಳಿ, ಬೆಳಕಿನ ಕೊರತೆ ಇದೆ.ಮೇಲ್ಛಾವಣಿ ಶೀಟಿನದಾಗಿದ್ದು ತಾಪದ ಬೇಗೆಯನ್ನು ಚಿಣ್ಣರು ಸಹಿಸಬೇಕಾಗಿದೆ. ಸನಿಹದಲ್ಲಿ ಕಸ ರಾಶಿ, ಅನೈರ್ಮಲ್ಯ ಸಮಸ್ಯೆಯೂ ಇದೆ.

***
ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿಗೆ ನಿವೇಶನ ಸಮಸ್ಯೆ ಇಲ್ಲ. ನಗರದೊಳಗೆ ಸರ್ಕಾರಿ ಜಾಗ, ನಿವೇಶನ ಸಿಗುವುದು ಕಷ್ಟವಾಗಿದೆ. ನಿವೇಶನ ಬೇಡಿಕೆ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.ಬಿ.
-ಎಚ್‌.ಕೃಷ್ಣಪ್ಪ, ಪ್ರಭಾರ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT